ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ದಿನಕ್ಕೊಂದು ವೇಷ ಕ್ಷಣಕ್ಕೊಂದು ವಂಚನೆ ನಡೆಯುತ್ತಿದೆ. ಈ ಸಾಲಿಗೆ ಇದೀಗ ಉದ್ಯಮ ತಾಣ ಮಿಶೋ ಹೆಸರಿನಲ್ಲೂ ಜಾಲವೊಂದು ಅಮಾಯಕರಿಗೆ ಮೋಸ ಮಾಡುವುದಕ್ಕೆ ಯತ್ನಿಸುತ್ತಿದೆ.
ಈ ಜಾಲವು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ನೆಕ್ಕಿಲಾಡಿ ನಿವಾಸಿಯಾಗಿರುವ ಉದ್ಯಮಿ ಜಿ.ಎಂ. ಮುಸ್ತಾಫ ಅವರಿಗೂ ಬಿಸಿ ತಟ್ಟಿಸಲು ಪ್ರಯತ್ನಿಸಿದೆ. ಆದರೆ ಚುರುಕಾಗಿ ಬುದ್ದಿವಂತಿಕೆ ಪ್ರಯೋಗಿಸಿದ ಮುಸ್ತಾಫ ಮೋಸ ಹೋಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಮುಸ್ತಫಾ ವಿವರಿಸಿದ್ದು ಹೀಗೆ, ಇತ್ತೀಚೆಗೆ ನನ್ನ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ಡ್ ಪೋಸ್ಟ್ ವೊಂದು ಮನೆಗೆ ಬಂದಿದೆ. ಅದನ್ನು ತೆರೆದು ನೋಡಿದಾಗ ಮಿಶೋ ಎಂಬ ಸಂಸ್ಥೆಯ ಉಲ್ಲೇಖವಿತ್ತು. ಸಂಸ್ಥೆಯು ಎಂಟು ವರ್ಷಗಳ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆ ಏರ್ಪಡಿಸಲಾಗಿದೆ. ಅತ್ಯಾಕರ್ಷಕ ಇಪ್ಪುತ್ತು ಬಹುಮಾನಗಳಿವೆ. ಅವುಗಳಲ್ಲಿ ಮೂರು ದೊಡ್ಡ ಬಹುಮಾನಗಳಿವೆ. ಉಳಿದವು ಸಣ್ಣ ಬಹುಮಾನಗಳು. ನಿಮಗೆ ಕಳುಹಿಸಿದ ಕಾರ್ಡ್ ಅನ್ನು ಸ್ಕ್ರಾಚ್ ಮಾಡಿ ನೋಡಿ, ನೀವು ಗೆದಿದ್ದರೆ ಅದರಲ್ಲಿ ಕೇಳಿರುವ ದಾಖಲೆಗಳನ್ನು ಕೊಟ್ಟಿರುವ ನಂಬರ್ ಗೆ ಕಳುಹಿಸಬೇಕು ಎಂದು ಹೇಳಲಾಗಿತ್ತು. ಸರಕಾರಿ ದಾಖಲೆಗಳನ್ನು ಕೂಡ ಕೇಳಲಾಗಿತ್ತು.
ಹಾಗೆ ಕಾರ್ಡ್ ಸ್ಕ್ರಾಚ್ ಮಾಡಿದ ಬಳಿಕ ವಾಟ್ಸಾಪ್ ನಂಬರಿಗೆ ಕಳುಹಿಸಿ ಎಂದು ಬರೆಯಲಾಗಿತ್ತು. ಮೊದಲನೇ ಬಹುಮಾನ 14,51,000 ಲಕ್ಷ ರೂ. ನಗದು ಬಹುಮಾನ, ಎರಡನೇ ಬಹುಮಾನ ಕಾರು, ಮೂರನೇ ಬಹುಮಾನ ದ್ವಿಚಕ್ರ ವಾಹನ ಎಂದು ಬರೆಯಲಾಗಿತ್ತು. ಕಾರ್ಡ್ ಸ್ಕ್ರಾಚ್ ಮಾಡಿ ನೋಡಿದಾಗ ಮೊದಲನೇ ಬಹುಮಾನ 14,51,000 ಲಕ್ಷ ರೂ. ನಮಗೆ ಬಂದಿತ್ತು. 501 ರೂ. ಹಾಗೂ ಸರಕಾರದಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಮೊಬೈಲ್ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಎಂದು ಅಲ್ಲಿಂದ ಸೂಚಿಸಲಾಗಿತ್ತು.
ನನಗೆ ಸ್ವಲ್ಪ ಅನುಮಾನಕ್ಕೆ ಬರುವುದಕ್ಕೆ ಶುರುವಾಯಿತು. ಒಂದು ವೇಳೆ ಅವರ ಅಕೌಂಟ್ ಗೆ ನಾನು ಹಣ ಕಳುಹಿಸಿದ್ದರೆ ವೈಯಕ್ತಿಕ ದಾಖಲಾತಿಗಳನ್ನು ನೀಡಿದ್ದರೆ ತಕ್ಷಣ ನನ್ನ ಅಕೌಂಟ್ ನಲ್ಲಿ ಇದ್ದ ಎಲ್ಲ ಹಣ ವಂಚಕರ ಪಾಲಾಗುತ್ತಿತ್ತು. ಯಾರೇ ಆಗಲಿ ಈ ರೀತಿಯಲ್ಲಿ ನಿಮಗೆ ಮೋಸ ಮಾಡುವ ಪ್ರಯತ್ನ ಮಾಡಬಹುದು , ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಮಾತ್ರ ಸಂಭವನೀಯ ಅಪಾಯಗಳಿಂದ ಪಾರಾಗಬಹುದಾಗಿದೆ ಎಂದು ಮುಸ್ತಾಫ ತಿಳಿಸಿದ್ದಾರೆ.