ಬ್ರಿಜೇಶ್ ಚೌಟ ಮತ್ತು ಪದ್ಮರಾಜ್ ನಡುವೆ ಪೈಪೋಟಿ, ದಕ್ಷಿಣ ಕನ್ನಡದಲ್ಲಿ ಮತದಾನ ನಡೆದು 40 ದಿನಗಳ ಕಾಯುವಿಕೆಗೆ ಇಂದಿಗೆ(ಜೂ.4) ಅಂತ್ಯ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದ 40 ದಿನಗಳ ಬಳಿಕ ಕೊನೆಗೂ ಮತ ಎಣಿಕೆ ಸನಿಹವಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು. ಜಾತಿ ಮತ್ತು ಹಿಂದುತ್ವದ ಆಧಾರಗಳ ಮೇಲೆ ಪೈಪೋಟಿ ನಡೆಯುತ್ತಿದೆ. ಪದ್ಮರಾಜ್ ಮತ್ತು ಬ್ರಿಜೇಶ್ ಚೌಟ ನಡುವೆ ನಡುವಿನ ಬಲಾಬಲದ ಬಗ್ಗೆ ಕೆಲವು ಗಂಟೆಗಳಲ್ಲೇ ತಿಳಿಯಲಿದೆ. ಬಹುತೇಕ ಮಧ್ಯಾಹ್ನದ ಸುಮಾರಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮೊದಲಿಗೆ ಬೆಳಗ್ಗೆ 8ರಿಂದ ಅಂಚೆ ಮತಗಳ ಎಣಿಕೆ ನಡೆಯಲಿದೆ, 8.30ರಿಂದ ಇವಿಎಂ ಮತ ಎಣಿಕೆ ನಡೆಯಲಿದೆ. ಇವಿಎಂಗಳ ಮತ ಎಣಿಕೆಯು ಪ್ರತೀ ವಿಧಾನಸಭಾ ಕ್ಷೇತ್ರವಾರು 8 ಕೊಠಡಿಗಳಲ್ಲಿ ತಲಾ 14 ಟೇಬಲ್‌ಗ‌ಳಂತೆ ಒಟ್ಟು 112 ಟೇಬಲ್‌ಗ‌ಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಿಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತೀ ಮೇಜಿಗೆ ಓರ್ವ ಸಹಾಯಕ ಚುನಾವಣಾ ಧಿಕಾರಿ, ಮೇಲ್ವಿಚಾರಕ, ಇಬ್ಬರು ಸಹಾಯಕರು, ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್‌ ಇರುತ್ತಾರೆ. ಎಣಿಕೆ ಸಿಬಂದಿಗೆ ರ್‍ಯಾಂಡಮೈಸೇಶನ್‌ ಮೂಲಕ ವಿಧಾನಸಭ ಕ್ಷೇತ್ರ ಮತ್ತು ಎಣಿಕೆ ಮೇಜನ್ನು ವಿಂಗಡನೆ ಮಾಡಲಾಗುವುದು. ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ವಿಧಾನಸಭಾವಾರು ಮತ ಎಣಿಕೆಯಲ್ಲಿ ಗರಿಷ್ಠ ಸುತ್ತು 18 ಮಂಗಳೂರು ನಗರ ದಕ್ಷಿಣ, ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ 18 ಸುತ್ತು, ಸುಳ್ಯ 17, ಪುತ್ತೂರು ಹಾಗೂ ಮೂಡುಬಿದಿರೆ 16, ಮಂಗಳೂರಿನಲ್ಲಿ ಕನಿಷ್ಠ 15 ಸುತ್ತು ಮತ ಎಣಿಕೆ ನಡೆಯಲಿದೆ.