ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದು ನಮಗೆಲ್ಲರಿಗೂ ಗೊತ್ತಿದೆ. ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ ಡೇವಿಡ್ ಜಾನ್ಸನ್ ಬದುಕಿದ್ದಾಗ ಸುಳ್ಯಕ್ಕೆ ಒಂದು ಸಲ ಭೇಟಿ ನೀಡಿದ್ದರು. ಇಲ್ಲಿನ ಸ್ಥಳೀಯ ಕ್ರಿಕೆಟ್ ಪ್ರೇಮಿಗಳ ಜೊತೆಗೆ ಬೆರೆತಿದ್ದರು ಅನ್ನೋದು ವಿಶೇಷ.
ಆಲೆಟ್ಟಿ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರಿಕೆಟ್ ಕೂಟದ ಎರಡನೇ ಆವೃತ್ತಿಯ ಉದ್ಘಾಟನೆಯಲ್ಲಿ ಡೇವಿಡ್ ಜಾನ್ಸನ್ ಭಾಗಿಯಾಗಿದ್ದರು. ಈ ವೇಳೆ ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಬಗ್ಗೆ, ಕ್ರಿಕೆಟ್ ಪ್ರೀತಿಯ ಬಗ್ಗೆ ಜಾನ್ಸನ್ ಮನ ತುಂಬಿ ಹೊಗಳಿದ್ದರು ಎಂದು ಎಪಿಎಲ್ ಕ್ರಿಕೆಟ್ ಕೂಟದ ಸಂಘಟಕರು ಸ್ಮರಿಸಿಕೊಂಡಿದ್ದಾರೆ. ದಾಮೋದರ್ ಪರಮಂಡಲ ಅವರ ಅಧ್ಯಕ್ಷತೆಯಲ್ಲಿ 2018ರಲ್ಲಿ ಕೂಟ ನಡೆದಿದ್ದನ್ನು ಸ್ಮರಿಸಬಹುದು.
ಡೇವಿಡ್ ಜಾನ್ಸನ್ 1996ರಲ್ಲಿ ಭಾರತ ಪರವಾಗಿ ಟೆಸ್ಟ್ ಪಂದ್ಯ ಆಡಿದ್ದರು. ಕೆಪಿಎಲ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರವಾಗಿ ಆಟವಾಡಿದ್ದರು. ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳುತ್ತಿದ್ದ ಡೇವಿಡ್ ಜಾನ್ಸನ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.