ಯಾತ್ರಿಕರ ಬಸ್ ಮೇಲೆ ಉಗ್ರರ ದಾಳಿ, 10 ಮಂದಿ ಸಾವು..! ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣವಚನ ನಡೆಯುತ್ತಿದ್ದ ವೇಳೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ..!

ನ್ಯೂಸ್ ನಾಟೌಟ್: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ(ಜೂ.09) ಸಂಜೆ ನಡೆದ ಉಗ್ರರ ದಾಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಬಸ್ ಚಾಲಕನಿಗೆ ಬುಲೆಟ್ ತಗುಲಿದ್ದು, ಇದರ ಪರಿಣಾಮ ಚಾಲಕ ವಾಹನದ ಮೇಲೆ ಸಮತೋಲನ ಕಳೆದುಕೊಂಡು ಬಸ್ ಆಳವಾದ ಕಂದಕಕ್ಕೆ ಬಿದ್ದಿದೆ. ಬಸ್ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಯಾತ್ರಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ನಾರಾಯಣ ಆಸ್ಪತ್ರೆ ಮತ್ತು ರಿಯಾಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ವರದಿ ತಿಳಿಸಿದೆ. ಒಂದೆಡೆ ರಾಷ್ಟ್ರಪತಿ ಭವನದಲ್ಲಿ ನಿನ್ನೆ ಸಾಯಂಕಾಲ ನರೇಂದ್ರ ಮೋದಿ ಹಾಗೂ ಸಚಿವರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ ನಡೆದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. , ಶಿವಖೋಡಿಯಿಂದ ಕತ್ರಾಗೆ ತೆರಳುತ್ತಿದ್ದ ಬಸ್ ಮೇಲೆ ಉಗ್ರರು ಸುಮಾರು 30ರಿಂದ 40 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆ ಉಗ್ರರನ್ನು ಹೆಡೆಮುರಿಕಟ್ಟಲು ಕಾರ್ಯಾಚರಣೆಗೆ ಇಳಿದಿದ್ದು, ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.