ನ್ಯೂಸ್ ನಾಟೌಟ್: ಮಂಗಳೂರಿನ ಪ್ರವಾಸಿಗರ ಮೇಲೆ ಸುಬ್ರಹ್ಮಣ್ಯದ ಬಿಸಿಲೆ ಘಾಟ್ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ವೇಳೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಮಂಗಳೂರಿನ ಕೊಟ್ಟಾರದ ಯುವಕ ತನ್ನ ಗೆಳೆಯರೊಂದಿಗೆ ಜೂ. 23ರಂದು ಪಟ್ಲಬೆಟ್ಟಕ್ಕೆ ಪ್ರವಾಸ ತೆರಳಿದ್ದರು. ದ್ವಿಚಕ್ರ ವಾಹನದಲ್ಲಿ ತೆರಳಿ ಪ್ರವಾಸಿ ತಾಣ ವೀಕ್ಷಿಸಿ ಹಿಂತಿರುಗುವ ವೇಳೆ ಪಟ್ಲಬೆಟ್ಟದ ಪ್ರವೇಶ ದಾರಿಯಲ್ಲಿದ್ದ ಬಾಡಿಗೆ ಚಾಲಕರು ಪ್ರವಾಸಕ್ಕೆ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿತ್ತು. ಮೊದಲಿಗೆ ಅವಾಚ್ಯ ಪದಗಳಿಂದ ನಿಂದಿಸಿ ಶೋಷಣೆ ನಡೆಸಿತ್ತು. ಮಾತ್ರವಲ್ಲ ಯುವಕರ ತಂಡದೊಂದಿಗೆ ಮಾತು ಬೆಳೆಸಿ ಏಕಾಏಕಿ ದಾಳಿ ನಡೆಸಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ವೈರಲ್ ಆಗಿತ್ತು, ಈ ಘಟನೆಯ ಕುರಿತು ಯುವಕರ ತಂಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಗೂಂಡಾಗಿರಿ ನಡೆಸಿದ ಆರೋಪಿಗಳಾದ ಗಗನ್, ಕಿರಣ್, ನಿಶಾಂತ್ ಹಾಗೂ ಮದನ್ ಎನ್ನುವ ನಾಲ್ವರನ್ನು ಬಂಧಿಸಿದೆ.
ಯುವಕರ ಮೇಲೆ ಹಲ್ಲೆ ಪ್ರಕರಣದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪಟ್ಲಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ನಿಯಮಬಾಹಿರ ಸುಲಿಗೆ ಕೃತ್ಯ ನಡೆಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯದ ಯುವಕರ ತಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಮಂಗಳವಾರ ಮನವಿ ಸಲ್ಲಿಸಿತ್ತು.