- +91 73497 60202
- [email protected]
- November 23, 2024 3:13 AM
ನ್ಯೂಸ್ ನಾಟೌಟ್: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಪಾಕಿಸ್ತಾನಿಗಳೆಂದು ನಿಂದಿಸಿರುವುದು ಬೋಳಿಯಾರ್‌ನಲ್ಲಿ ನಡೆದ ಚೂರಿ ಇರಿತ ಘಟನೆಗೆ ಕಾರಣ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ. “ಮೋದಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ 30-40 ಮಂದಿ ಇದ್ದರು. ಮಾರ್ಗಮಧ್ಯೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಅದಾದ ಮೇಲೆ ಒಂದು ಬೈಕ್‌ನಲ್ಲಿ ಮೂವರು ಯುವಕರು ವಾಪಸ್ ತೆರಳಿ ಘೋಷಣೆ ಕೂಗಿದ್ದಾರೆ. ಆಗ ಅಲ್ಲಿದ್ದ 20 ಮಂದಿ ಒಟ್ಟು ಸೇರಿದ್ದಾರೆ, ಕೆಲವರು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬಿಬ್ಬರು ಬಾರ್ ಬಳಿ ಚೂರಿಯಿಂದ ಇರಿದಿದ್ದು, ಇದರಿಂದ ಒಬ್ಬನ ಹೊಟ್ಟೆಗೆ, ಇನ್ನೊಬ್ಬನ ಬೆನ್ನಿಗೆ ಗಾಯವಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ” ಎಂದಿದ್ದಾರೆ. ಭಾರತ್ ಮಾತಾ ಕಿ ಜೈ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ. ಬದಲಾಗಿ ಮೆರವಣಿಗೆಯಲ್ಲಿ ಆಟೋ ರಿಕ್ಷಾ ನಿಲ್ದಾಣದ ಬಳಿ ಪಾಕಿಸ್ತಾನದೊಂದಿಗೆ ಸಂಬಂಧ ಕಲ್ಪಿಸಿ ಘೋಷಣೆಗಳನ್ನು ಕೂಗಿದ್ದಾರೆ. ನೀವು ಪಾಕಿಸ್ತಾನದ ಪರ ಇದ್ದೀರಿ, ಮೋದಿ ವಿರೋಧಿಗಳು.. ಎಂಬ ಅರ್ಥದ ಆಕ್ಷೇಪಾರ್ಹ ಘೋಷಣೆ ಕೂಗಿದ್ದರು. ಇದು ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಂ ಸಮುದಾಯದವರನ್ನು ತಲುಪಿ ಇದರಿಂದ ಪ್ರಚೋದನೆಗೊಂಡ ಕೆಲವರು ಚೂರಿಯಿಂದ ಇರಿದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಮಧ್ಯೆ ಪೊಲೀಸರು ಅಬೂಬಕರ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಆರಕ್ಕೇರಿದೆ. ಉಳಿದ 14 ಮಂದಿಯನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬ ರೌಡಿಶೀಟರ್ ಆಗಿದ್ದು, ಪಾಕೆಟ್ ಚಾಕುವಿನಿಂದ ಇರಿದಿರುವುದು ತಿಳಿದುಬಂದಿದೆ ಎನ್ನಲಾಗಿದೆ. ಕಳೆದ 12 ತಿಂಗಳುಗಳಿಂದ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಚುನಾವಣೆಯ ಫಲಿತಾಂಶದ ಅನಂತರ ಏಕಾಏಕಿ ಮೂರು ಘಟನೆಗಳು ನಡೆದಿವೆ. ಬುಧವಾರ(ಜೂ.12)ದಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಗುವುದು. ರಾತ್ರಿ ವೇಳೆ ವಾಹನ ತಪಾಸಣೆಯನ್ನು ಕೂಡ ಬಿಗಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಆಯುಕ್ತರು ಹೇಳಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ