ನ್ಯೂಸ್ ನಾಟೌಟ್: ನಂಬಿಕೆಗೆ ಮತ್ತೊಂದು ಹೆಸರೇ ಶ್ವಾನ. ಈಗಿನ ಕಾಲದಲ್ಲಿ ನಾಯಿಗಿರುವ ನಿಯತ್ತೂ ಮನುಷ್ಯನಿಗೆ ಇರುವುದಿಲ್ಲ. ನೀವು ಒಂದು ತುಂಡು ರೊಟ್ಟಿ ಹಾಕಿ, ಅದು ಸಾಯುವ ತನಕ ನಿಮ್ಮನ್ನು ಕಾಯುತ್ತದೆ. ಅಂತಹ ಶ್ವಾನವೊಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದಾಗ ಮಾನವೀಯ ಹೃದಯವುಳ್ಳ ಕೆಲವರು ನೆರವಾಗಿ ಅದನ್ನು ಆರೈಕೆ ಮಾಡಿ ಬದುಕಿಸಿದ್ದಾರೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಗುತ್ತಿಗಾರಿನಲ್ಲಿ. ಇಲ್ಲಿನ ಪಿಎಸಿ ಬ್ಯಾಂಕ್ ಪೆಟ್ರೋಲ್ ಪಂಪ್ ಆವರಣದಲ್ಲಿ ಬೀದಿ ನಾಯಿಯೊಂದು ಯಾವಾಗಲೂ ಕಾವಲುಗಾರನಂತೆ ಕೆಲಸ ಮಾಡುತ್ತಿತ್ತು. ರಾತ್ರಿ ಹೊತ್ತು ಅನಗತ್ಯವಾಗಿ ಯಾರನ್ನೂ ಪಂಪ್ ಒಳಗೆ ಬರುವುದಕ್ಕೆ ಬಿಡುತ್ತಿರಲಿಲ್ಲ. ನಿಷ್ಠೆಯಿಂದ ಪಂಪ್ ಕಾಯುತ್ತಿದ್ದ ಶ್ವಾನ ಪಂಪ್ ಸಿಬ್ಬಂದಿ ನೆಚ್ಚಿನ ಗೆಳೆಯನಂತಿತ್ತು. ಆದರೆ ಇಲ್ಲಿ ರಸ್ತೆಯ ಮುಂಭಾಗದಲ್ಲಿ ವಾಹನವೊಂದು ಡಿಕ್ಕಿಯಾಗಿ ಶ್ವಾನದ ಕಾಲಿಗೆ ಗಾಯವಾಗಿತ್ತು. ಜಜ್ಜಿ ಹೋದ ಕಾಲಿನಿಂದ ನಿರಂತರ ರಕ್ತ ಸೋರುತ್ತಿತ್ತು.
ಇದನ್ನು ಗಮನಿಸಿದ ಅಲ್ಲಿಯ ಸಿಬ್ಬಂದಿ ಆಟೋ ಚಾಲಕ ಚಂದ್ರಶೇಖರ ಕಡೋಡಿ ಅವರಿಗೆ ಮೊಬೈಲ್ ಕರೆ ಮಾಡಿದರು. ತಕ್ಷಣ ಸ್ಥಳಕ್ಕೆ ಬಂದ ಕಡೋಡಿ ಪಂಪ್ ಸಿಬ್ಬಂದಿ ಕಾರ್ತಿಕ್ ಪೈಕ, ದಿನೇಶ್ ಮೊಟ್ಟೆಮನೆ ಮತ್ತು ದೀಕ್ಷಿತ್ ಕುಕ್ಕುಜೆ ಅವರೆಲ್ಲರೂ ಸೇರಿಕೊಂಡು ಶ್ವಾನಕ್ಕೆ ಸೂಕ್ತ ಚಿಕಿತ್ಸೆ ಮಾಡಿ ರಕ್ತ ಸೋರುವುದನ್ನು ತಡೆಗಟ್ಟಿದರು. ಇದೀಗ ಶ್ವಾನ ಚೇತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.