ನ್ಯೂಸ್ ನಾಟೌಟ್: ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಮಗುವೊಂದನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಿಪಟೂರು ಬಳಿ ಕೆಲ ಕಿಡಿಗೇಡಿಗಳು ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಹೇಯಕರ ಘಟನೆ ನಡೆದಿದೆ. ಇದೀಗ ಘಟನೆಯನ್ನು ಸಾರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಗುವೊಂದು ಅನಾರೋಗ್ಯಕ್ಕೆ ಈಡಾಗಿತ್ತು. ಈ ಸಂದರ್ಭದಲ್ಲಿ ತುರ್ತಾಗಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾರೊಂದು ಅಡ್ಡ ಬಂದುದರಿಂದ ಸೈಡ್ ಕೊಡಿ ಎಂದು ಆಂಬ್ಯುಲೆನ್ಸ್ ಚಾಲಕ ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಕಾರಿನಲ್ಲಿದ್ದವರು ಆಂಬ್ಯುಲೆನ್ಸ್ ವಾಹನವನ್ನು ತಡೆದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂದೆ ಇದ್ದ ಅನಾರೋಗ್ಯ ಪೀಡಿತ ಮಗುವಿನ ತಾಯಿ ಹೊಡಿಬೇಡಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದರೂ ಬಿಡದೆ ಆಂಬ್ಯುಲೆನ್ಸ್ ಚಾಲಕನಿಗೆ ನಿರ್ದಯವಾಗಿ ಥಳಿಸಿದ್ದಾರೆ.
ಒಂದು ಜೀವ ಉಳಿಸುವುದಕ್ಕೋಸ್ಕರ ಪ್ರಯತ್ನಿಸುವ ಆಂಬ್ಯುಲೆನ್ಸ್ ಚಾಲಕನ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಅನ್ನುವ ಒತ್ತಾಯ ಕೇಳಿ ಬಂದಿದೆ. ಘಟನೆಯನ್ನು ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಕಟು ಪದಗಳಿಂದ ಟೀಕಿಸಿದೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದೆ.