ನ್ಯೂಸ್ ನಾಟೌಟ್: ನಟ ದರ್ಶನ್ ಮತ್ತು ಸಹಚರರಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಅನ್ನುವ ವ್ಯಕ್ತಿಯನ್ನು ಬೆಂಗಳೂರಿಗೆ ಕರೆ ತಂದು ಹತ್ಯೆ ಮಾಡಿದ್ದಾರೆ ಅನ್ನುವ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಈ ಬಗ್ಗೆ ಮಂಗಳವಾರ (ಜೂ.11) ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚು ಕೆಲಸ ಮಾಡಿದಾಗ ಆತ ಚಿತ್ರ ದುರ್ಗ ಮೂಲದವನು ಎಂದು ತಿಳಿದು ಬಂದಿದೆ. ವಿಚಾರಣೆ ನಡೆಸಿದಾಗ ಚಲನಚಿತ್ರ ನಟ ದರ್ಶನ್ ಮತ್ತು ಆತನ ಸಹಚರರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈಗಲೇ ಹೆಚ್ಚಿನ ಮಾಹಿತಿ ಕೊಡುವುದು ಸಾಧ್ಯವಿಲ್ಲ. ಇನ್ನಷ್ಟು ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ತಿಳಿಸಿದರು.
ಸದ್ಯ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ, ಉದ್ಯಮಿಯೊಬ್ಬರ ಪುತ್ರ ಕೂಡ ಇದ್ದಾನೆ ಎನ್ನಲಾಗಿದೆ.
ರೇಣುಕಾಸ್ವಾಮಿ 33 ವರ್ಷ ಚಿತ್ರದುರ್ಗ ಮೂಲದ ವ್ಯಕ್ತಿ. ಅಪೋಲೋ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯಮ ವರ್ಗದ ಕುಟುಂಬ ಹಿನ್ನೆಲೆಯುಳ್ಳ ವ್ಯಕ್ತಿಗೆ ಮದುವೆ ಆಗಿತ್ತು. ಪತ್ನಿ ಮೂರು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಮೃತನ ತಂದೆ-ತಾಯಿಯ ಕೂಗು ಮುಗಿಲು ಮುಟ್ಟಿದೆ.
ರೇಣುಕಾ ಸ್ವಾಮಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ್ದ. ಪವಿತ್ರಾ ಯಾವುದೇ ಪೋಸ್ಟ್ ಹಾಕಿದರೂ ಅದಕ್ಕೆ ಆತ ಕಳೆದ ಒಂದು ತಿಂಗಳಿನಿಂದ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಚಿತ್ರದುರ್ಗದ ಮೂಲದ ಆತನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶೇಡ್ ಒಂದರಲ್ಲಿ ದರ್ಶನ್ ಕಡೆಯವರು ಈತನಿಗೆ ಬಲವಾದ ಆಯುಧದಿಂದ ಹೊಡೆದಿದ್ದಾರೆ. ಆತ ಮೃತಪಟ್ಟ ಬಳಿಕ ಶವವನ್ನು ತೆಗೆದುಕೊಂಡು ಬಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೋರಿ ಒಂದಕ್ಕೆ ಎಸೆದಿದ್ದಾರೆ.
ಜೂನ್ 9ರಂದು ಆತನ ಮೇಲೆ ಹಲ್ಲೆ ನಡೆದಿತ್ತು. ಎರಡು ದಿನ ಕಳೆದು ಮೃತದೇಹವನ್ನು ಶ್ವಾನಗಳು ಎಳೆದಾಡುತ್ತಿದ್ದಾಗ ಪಕ್ಕದ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಒಬ್ಬರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸುತ್ತಾರೆ. ಮೂವರು ಬಂದು ಹಣಕಾಸಿನ ವಿಚಾರದಲ್ಲಿ ವಿವಾದಗೊಂಡು ಆತನನ್ನು ಕೊಲೆ ಮಾಡಿದೆವು ಎಂದು ಮೂವರು ಶರಣಾಗುತ್ತಾರೆ. ಆದರೆ ಪೊಲೀಸರಿಗೆ ಎಲ್ಲೋ ಅನುಮಾನ ಬಂದು ಹೆಚ್ಚಿನ ತನಿಖೆ ನಡೆದಾಗ ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪೊಲೀಸರಿಂದ ದರ್ಶನ್ ಅವರನ್ನು ಬಂಧಿಸಲಾಗಿದೆ. ವಿಜಯ ನಗರ ಎಸಿಪಿ ದಾಳಿಯಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Click 👇