ನ್ಯೂಸ್ ನಾಟೌಟ್: ಮಾನವನ ಬದುಕು ಮೂರೇ ದಿನ ಅನ್ನೋದು ಇತ್ತೀಚಿನ ದಿನಗಳಲ್ಲಿ ಹೆಚ್ಚು ನಿರೂಪಿತವಾಗುತ್ತಿದೆ. ಈಗ ಇರುವವರು ಮರು ಕ್ಷಣದಲ್ಲಿ ಇರುವುದಿಲ್ಲ. ಹೃದಯಾಘಾತದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಯಕ್ಷಗಾನದ ರಂಗಸ್ಥಳದಲ್ಲಿ ಮಿಂಚಿ ಇನ್ನೇನು ವೇಷ ಕಳಚಿ ತಮ್ಮ ಮನೆಯನ್ನು ಸೇರಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಪುತ್ತೂರಿನ ಕಲಾವಿದರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಕಲಾವಿದರಾಗಿರುವ ಗಂಗಾಧರ ಪುತ್ತೂರು (60 ವರ್ಷ) ಮೇ 1 ರಂದು ಕುಂದಾಪುರ ಸಮೀಪದ ಕೋಟಾ ಗಾಂಧಿ ಮೈದಾನದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಕಥಾ ಪ್ರಸಂಗದಲ್ಲಿ ಪಾಲ್ಗೊಂಡಿದ್ದರು. ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣ ಒರೆಸಬೇಕು ಅನ್ನುವಷ್ಟರಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.