ನ್ಯೂಸ್ ನಾಟೌಟ್: ಮನೆಮುಂದೆ ಆಟವಾಡುತ್ತಿದ್ದ ಮಕ್ಕಳು ಇದ್ದಕ್ಕಿದಂತೆ ಕಾಣೆಯಾಗಿ ೩ ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ಇಂದು(ಮೇ.13) ವರದಿಯಾಗಿದೆ. ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಮೂವರು ಮಕ್ಕಳು ವಿಜಯಪುರ ನಗರದ ಚಾಬಕಸಾಬ್ ದರ್ಗಾ ಬಳಿಯ ಮನೆಯಿಂದ ಕಾಣೆಯಾಗಿದ್ದರು. ಮೂವರು ಮಕ್ಕಳು ಬೇಸಿಗೆ ರಜೆಗೆಂದು ಮಾವನ ಮನೆಗೆ ಬಂದಿದ್ದರು. ಇದೀಗ ದುರಂತದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಗದಗ ಮೂಲದ ಅನುಷ್ಕಾ ಅನಿಲ್ ದಹಿಂಡೆ (9) ವಿಜಯ್ ಅನಿಲ್ ದಹಿಂಡೆ ( 7) ಹಾಗೂ ವಿಜಯಪುರದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಮೃತ ಮಕ್ಕಳು ಎಮದು ಗುರುತಿಸಲಾಗಿದೆ. ಮಕ್ಕಳು ಬಹಳ ಸಮಯವಾದರೂ ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಸಾಯಂಕಾಲ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲು ಮಾಡಿದ್ದರು. ನಿನ್ನೆಯಿಂದಲೇ ಕುಟುಂಬಸ್ಥರು ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ಮದ್ಯಾಹ್ನದ ವೇಳೆ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳ ಯಡವಟ್ಟಿನಿಂದ ಮಕ್ಕಳ ಸಾವನ್ನಪ್ಪಿದ್ದಾರೆಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಮಕ್ಕಳ ಶವಗಳನ್ನ ಕೊಂಡೊಯ್ಯಲು ಬಿಡದೆ ಗಲಾಟೆ ಮಾಡಿದ್ದಾರೆ. ಚರಂಡಿ ನೀರು ಸಂಸ್ಕರಣಾ ಘಟಕಕ್ಕೆ ಸೆಕ್ಯೂರಿಟಿ ಇಲ್ಲದೆ ಇರೋದಕ್ಕೆ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಮಕ್ಕಳ ಸಾವಿಗೆ ನ್ಯಾಯ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ.
Click 👇