ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯ ನಡೆಯುತ್ತಿರುವಾಗ ಸಾಮಾಜಿಕ ಜಾಲತಾಣದಲ್ಲಿ (Social Media) ಮೋದಿ ವರ್ಸಸ್ ದೀದಿ ಆರ್ಟಿಫಿಶಿಯಲ್ (AI) ವಿಡಿಯೋ ವಾರ್ ಆರಂಭವಾಗಿದೆ. ನೆಟ್ಟಿಗರು ಇಬ್ಬರ ವಿಡಿಯೋವನ್ನು ಹಾಕಿ ಸರ್ವಾಧಿಕಾರಿ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. Spitting Facts ಹೆಸರಿನ ಎಕ್ಸ್ ಖಾತೆ ಬಿಳಿ ಬಣ್ಣದ ಸೀರೆ ಉಟ್ಟುಕೊಂಡು ನೃತ್ಯ ಮಾಡುತ್ತಿರುವ ಮಹಿಳೆಯ ಎಐ ವಿಡಿಯೋವನ್ನು ಅಪ್ಲೋಡ್ ಮಾಡಿ ಇದು ಶುದ್ಧ ಚಿನ್ನ, ಇದನ್ನು ಮಾಡಿದವರು ಆಸ್ಕರ್ ಪ್ರಶಸ್ತಿಗೆ ಅರ್ಹರು ಎಂದು ಬರೆದು ಪೋಸ್ಟ್ ಮಾಡಿತ್ತು.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಕೋಲ್ಕತ್ತಾ ಸೈಬರ್ ಕ್ರೈಂ ಪೊಲೀಸರು (Kolkata Police) ಕೂಡಲೇ ಹೆಸರು ಮತ್ತು ನಿವಾಸ ಸೇರಿದಂತೆ ನಿಮ್ಮ ಗುರುತನ್ನು ತಕ್ಷಣವೇ ಬಹಿರಂಗಪಡಿಸಲು ನಿಮಗೆ ನಿರ್ದೇಶಿಸಲಾಗಿದೆ. ಕೇಳಿದ ಮಾಹಿತಿಯು ಬಹಿರಂಗಗೊಳ್ಳದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ವಿಚಾರ ನೆಟ್ಟಿಗರಿಗೆ ತಿಳಿದ ಕೂಡಲೇ ಎಐ ವಿಡಿಯೋವನ್ನು ಹಂಚಿಕೊಳ್ಳಲು ಆರಂಭಿಸಿದರು. ಈ ವಿಡಿಯೋವನ್ನು ಯಾರು ಶೇರ್ ಮಾಡಬೇಡಿ. ಈ ಶೇರ್ ಮಾಡಿದ ಕೂಡಲೇ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬರೆದು ಕೋಲ್ಕತ್ತಾ ಪೊಲೀಸರನ್ನು ಟ್ಯಾಗ್ ಮಾಡತೊಡಗಿದರು. ಕೆಲವೆ ಗಂಟೆಗಳಲ್ಲಿ ವಿಡಿಯೋ ವೈರಲ್ ಆಗಿ ದೇಶದಲ್ಲೇ ಕೋಲ್ಕತ್ತಾ ಪೊಲೀಸರು ಟ್ರೆಂಡ್ ಆಗಿದ್ದರು. ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಂತೆ ಕೋಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ರಾತ್ರಿ ಕೃಷ್ಣ ಎಂಬವರು ಮೋದಿ ಅವರ ಎಐ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕೆ ‘ದಿ ಡಿಕ್ಟೇಟರ್’ ನನ್ನನ್ನು ಬಂಧಿಸಲ್ಲ ಎನ್ನುವುದು ನನಗೆ ತಿಳಿದಿದೆ ಎಂದು ಬರೆದಿದ್ದರು. ಈ ಪೋಸ್ಟ್ ಗಮನಿಸಿದ ಮೋದಿ (PM Narendra Modi) ನಿಮ್ಮಂತೆ ನಾನು ನನ್ನ ವಿಡಿಯೋವನ್ನು ನೋಡಿ ಸಂತೋಷಪಟ್ಟಿದ್ದೇವೆ. ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಸೃಜನಶೀಲತೆಯನ್ನು ನೋಡಿ ನನಗೆ ಸಂತೋಷವಾಗುತ್ತಿದೆ ಎಂದು ಬರೆದು #PollHumour ಹ್ಯಾಶ್ ಟ್ಯಾಗ್ ಬಳಸಿ ರಿಪೋಸ್ಟ್ ಮಾಡಿದರು. ಈ ವಿಡಿಯೋ ಈಗ ಎಕ್ಸ್ನಲ್ಲಿ ವೈರಲ್ ಆಗಿದೆ. ಕೋಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ ವಿಡಿಯೋ ಮತ್ತು ಮೋದಿ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡಿ ಸರ್ವಾಧಿಕಾರಿ ಯಾರು ಎಂದು ಪ್ರಶ್ನಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.