ನ್ಯೂಸ್ ನಾಟೌಟ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ ಬರೋಬ್ಬರಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದ್ವಿತೀಯ ಪಿಯುಸಿ ಪಾಸ್ ಆದವರೂ ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊನೆಯ ದಿನ ಮೇ 18 ಎಂದು ವರದಿ ತಿಳಿಸಿದೆ.
ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರುವುದು ಕಡ್ಡಾಯ. ಪುರುಷರ ಎತ್ತರ 160 ಸೆಂಟಿ ಮೀಟರ್, ಮಹಿಳೆಯರ ಎತ್ತರ 150 ಸೆಂಟಿ ಮೀಟರ್ ಇರಬೇಕು. ಮುಕ್ತ ಶಾಲೆ ಅಥವಾ ಮುಕ್ತ ವಿವಿಯಿಂದ ಪಿಯುಸಿ/ 12ನೇ ತರಗತಿ ಪಾಸಾದವರು ಅಥವಾ ಜೆಒಸಿ / ಜೆಎಲ್ಸಿ ಕೋರ್ಸ್ಗಳನ್ನು ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ತಿಳಿಸಿದೆ.
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ ಎನ್ನಲಾಗಿದ್ದು, 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ನೀಡಲಾಗಿದೆ. ಸಾಮಾನ್ಯ ಮತ್ತು ಇತರ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 750 ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಶೇಷ ಚೇತನ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ : https://cetonline.karnataka.gov.in/kea/kbknrk2023 ಕ್ಲಿಕ್ ಮಾಡಿ.
Click 👇