ನ್ಯೂಸ್ ನಾಟೌಟ್: ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ‘ನ್ಯೂಸ್ ನಾಟೌಟ್’ ತಂಡದ ಕಾಲೆಳೆಯುವ ಪ್ರಯತ್ನವನ್ನ ವಿಘ್ನ ಸಂತೋಷಿಗಳು ನಡೆಸುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸುದ್ದಿಗಳನ್ನು ಬೇಕಾಬಿಟ್ಟಿ ‘ಎಡಿಟ್’ ಮಾಡಿಕೊಂಡು ‘ನ್ಯೂಸ್ ನಾಟೌಟ್’ ತಂಡದ ಬಗ್ಗೆ ಸುಳ್ಳು ಸಂದೇಶವನ್ನು ಸಮಾಜಕ್ಕೆ ಸಾರುವ ಕಾಣದ ಕೈಗಳ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇದೀಗ ಸಿಕ್ಕಿದೆ.
ನಾವು ಪ್ರಕಟಿಸಿದ ವರದಿಯಲ್ಲಿ “ಮತ್ತಿತರರಿದ್ದರು” ಎಂಬ ಒರಿಜಿನಾಲಿಟಿ ನ್ಯೂಸ್ ಅನ್ನು ಫೋಟೋ ಶಾಪ್ ಬಳಸಿ ಎಡಿಟ್ ಮಾಡಿ “ಸತ್ತರು’ ಎಂದು ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಶೇರ್ ಮಾಡುತ್ತಿದ್ದಾರೆ. ಈ ವಿಕೃತಿ ಮೆರೆಯುವ ಕುತಂತ್ರಿಗಳಿಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಒಂದಂತೂ ಹೇಳಬಹುದು.. ನೀವು ನಮ್ಮ ಸಂಸ್ಥೆಯ ಮೇಲೆ ಎಸೆಯುವ ಒಂದೊಂದು ಕಲ್ಲುಗಳಿಂದಲೇ ನಾವು ನಮ್ಮ ಸಂಸ್ಥೆಯನ್ನು ಬಲವಾಗಿ ಕಟ್ಟಿ ಬೆಳೆಸುತ್ತೇವೆ. ಎಷ್ಟೇ ಸವಾಲುಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಪತ್ರಿಕೋದ್ಯಮದಲ್ಲಿ ಅದರಲ್ಲೂ ಸುಳ್ಯದಲ್ಲಿ ನ್ಯೂಸ್ ನಾಟೌಟ್ ಸಂಸ್ಥೆ ನಿಲ್ಲಬಾರದು, ತಲೆ ಎತ್ತಲೇಬಾರದು ಅನ್ನುವ ಬಲವಾದ ಸಂಕಲ್ಪದಿಂದ ಕೆಲವು ದುಷ್ಟ ಶಕ್ತಿಗಳು ಕಾರ್ಯಾಚರಿಸುತ್ತಿವೆ. ಸುಳ್ಯದ ಜನರು, ಸಹೃದಯಿ ಓದುಗರು, ನಮ್ಮ ಪೋಷಕರು, ರಾಜ್ಯದ ದೊಡ್ಡ ಓದುಗ ಬಳಗ ನಮ್ಮೊಂದಿಗೆ ಇರುವ ತನಕ ಇಂತಹ ನೂರು ಎಡಿಟ್ ಶೇರ್ ಆದರೂ ನಮ್ಮನ್ನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಓದುಗ ಪ್ರಭುಗಳಾದ ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ಇಂತಹ ಕಿಡಿಗೇಡಿಗಳ ಚಿಲ್ಲರೆ ಕೃತ್ಯಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಗತ್ಯ ದೂರುಗಳು ಸಾರ್ವಜನಿಕರಿಂದ ಬಂದರೆ ನಾವು ಸೈಬರ್ ಪೊಲೀಸರಿಗೆ ದೂರು ನೀಡುತ್ತೇವೆ. ಇದನ್ನ ಸಂಬಂಧಪಟ್ಟವರಿಗೆ ಶೇರ್ ಮಾಡಿದವರ ಬಗ್ಗೆ ನಿಖರ ಮಾಹಿತಿ ಸಿಕ್ಕಿದೆ. ಪೊಲೀಸರು ಕೇಳಿದರೆ ಯಾವ ಕ್ಷಣದಲ್ಲೂ ನಾವು ನೀಡಲು ಸಿದ್ಧ. ಒಂದು ಸುದ್ದಿಯನ್ನು ತಿರುಚಿ ಬರೆಯುವುದು, ಶೇರ್ ಮಾಡುವುದು, ಮಾನ ಹಾನಿ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಇಂತಹವರಿಗೆ ಸೈಬರ್ ಕ್ರೈಂ ವಿಭಾಗದಲ್ಲಿ ದಂಡ, ಜೈಲು ಶಿಕ್ಷೆಯೂ ಇದೆ. ಹೀಗಾಗಿ ಶೇರ್ ಮಾಡುವವರು ಯಾವುದೇ ಪೂರ್ವ ಪರ ಮಾಹಿತಿ ಇಲ್ಲದೆ ಗ್ರೂಪ್ ಗೆ ಶೇರ್ ಮಾಡುವುದು ಅಪರಾಧ. ವರದಿ ತಿರುಚಿ, ಫೋಟೋ ಶಾಪ್ ಬಳಸಿ ಎಡಿಟ್ ಮಾಡಿದ ಪಾಪದಷ್ಟೇ ಪಾಲನ್ನು ಶೇರ್ ಮಾಡುವವರು ಕೂಡ ಪಡೆಯುತ್ತಾರೆ. ಒಬ್ಬ ಸಾಮಾನ್ಯ ಓದುಗನಿಗೆ ಒರಿಜಿನಲ್ ಯಾವುದು ಹಾಗೂ ನಕಲಿ ಯಾವುದು ಅನ್ನೋದು ನಾವು ಕೊಟ್ಟಿರುವ ಸಾಕ್ಷಿಗಳನ್ನು ನೋಡಿದರೆ ಗೊತ್ತಾಗುತ್ತದೆ.