Temple: ದೇಗುಲದ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿದ ಅರ್ಚಕ..! ಟಿವಿ ನಿರೂಪಕಿ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

ನ್ಯೂಸ್ ನಾಟೌಟ್: ದೇವಸ್ಥಾನದ ಅರ್ಚಕ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ ನಡೆಸಿದ್ದಾಗಿ ಜನಪ್ರಿಯ ಟಿವಿ ನಿರೂಪಕಿಯೊಬ್ಬರು ಆರೋಪಿಸಿದ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಬಲ್‌ ದೇಗುಲದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ಇದೀಗ ನಿರೂಪಕಿ ವಿರುಗಂಬಾಕ್ಕಂ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ. ಸಾಲಿಗ್ರಾಮ ಮೂಲದ, ಖಾಸಗಿ ವಾಹಿನಿ ನಿರೂಪಕಿ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 30 ವರ್ಷದ ನಿರೂಪಕಿ ಆಧ್ಯಾತ್ಮಿಕತೆ ಕಡೆಗೆ ಒಲವು ಹೊಂದಿರುವ ವ್ಯಕ್ತಿಯಾಗಿದ್ದು, ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅದರಂತೆ ಚೆನ್ನೈಯ ಪರ್ಯಾಸ್‌ನಲ್ಲಿರುವ ಈ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ಜತೆಗೆ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ ಕಾರ್ತಿಕ್‌ ಮುನಿಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮ, ವಿಶೇಷ ಪೂಜೆಗಳ ಬಗ್ಗೆ ನಿರೂಪಕಿಗೆ ಮಾಹಿತಿ ನೀಡುತ್ತಿದ್ದ. ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸುತ್ತಿದ್ದ. ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಇವರಿಬ್ಬರ ನಡುವೆ ಆತ್ಮೀಯತೆ ಬೆಳದಿತ್ತು. ಒಂದು ದಿನ ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಕಾರ್ತಿಕ್‌ ಮುನಿಸ್ವಾಮಿ ಆಕೆಯನ್ನು ತನ್ನ ಬೆನ್ಝ್‌ ಕಾರಿನಲ್ಲಿ ಕರೆದುಕೊಂಡು ಮನೆಗೆ ಡ್ರಾಪ್‌ ಮಾಡಿದ್ದ. ಈ ವೇಳೆ ಆತ ತೀರ್ಥದಲ್ಲಿ ನಿದ್ದೆ ಬರುವ ಮಾತ್ರ ಬೆರೆಸಿ ನೀಡಿದ್ದ. ಬಳಿಕ ಅತ್ಯಾಚಾರ ಎಸಗಿದ್ದ. ನಂತರ ನಿರೂಪಕಿಗೆ ತನ್ನ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ತಿಳಿದು ಬಂದಿತ್ತು. ಅಲ್ಲದೆ ಆಕೆ ಗರ್ಭಿಣಿಯೂ ಆಗಿದ್ದರು. ಇದನ್ನು ತಿಳಿದ ಕಾರ್ತಿಕ್‌ ಆಕೆಯನ್ನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ. ನಂತರ ವಡಾಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಬಳಿಕ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. Click 👇