ನ್ಯೂಸ್ ನಾಟೌಟ್: ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕುರಿತು ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರ ಆಗುತ್ತಿದ್ದು, ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಜನ ವಿಪರೀತ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಸನದಲ್ಲಿ ರೋಡ್ ರೋಡ್ನಲ್ಲಿ ಸಿಗುತ್ತಿರುವ, ಪಾರ್ಕ್ & ಕ್ರೀಡಾಂಗಣದಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್ಡ್ರೈವ್ ಒಳಗೆ, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಖಾಸಗಿ ವಿಡಿಯೋ ಇವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದೇ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೂಡ ಘಟನೆ ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಕೂಡ ಆದೇಶ ನೀಡಿದೆ. ಹೀಗಿದ್ದಾಗಲೇ ವಿದೇಶದಲ್ಲಿ ಕೂಡ, ಪ್ರಜ್ವಲ್ ರೇವಣ್ಣ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಶ್ಲೀಲ ವಿಡಿಯೋ ವೈರಲ್ ಕೇಸ್ ಬಗ್ಗೆ ವಿದೇಶಿ ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಸಿಂಗಪುರದ ಪ್ರಮುಖ ಮಾಧ್ಯಮ ಒಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಿಂದ ಈ ಕೃತ್ಯ ನಡೆದಿರುವ ಬಗ್ಗೆ ಚರ್ಚೆ ಮಾಡಿದೆ. ಅಲ್ಲದೆ ಇದೇ ಘಟನೆ ಆಧಾರವಾಗಿ ಇಟ್ಟುಕೊಂಡು ವಿರೋಧ ಪಕ್ಷಗಳು ಈಗ ಬಿಜೆಪಿ & ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
ಮತ್ತೊಂದು ಕಡೆ ದಿನದಿಂದ ದಿನಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ದೊಡ್ಡ ಮಟ್ಟಕ್ಕೆ ಹೋಗುತ್ತಿದ್ದು, ಆದಷ್ಟು ಬೇಗ ವಿಚಾರಣೆ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಈಗಾಗಲೇ ದೇಶಾದ್ಯಂತ ಈ ವಿಚಾರ ಸಂಚಲನ ಸೃಷ್ಟಿಸಿದ್ದು, ಈಗ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಸಂಸದ ಪ್ರಜ್ವಲ್ ರೇವಣ್ಣ ಈಗ ಭಾರತವನ್ನು ಬಿಟ್ಟು ಹೊರದೇಶಕ್ಕೆ ಹೋಗಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಜರ್ಮನಿಗೆ ಹೋಗಿದ್ದಾರೆ ಎನ್ನಲಾಗಿದೆ.