ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಸಿಗಾಗಿ ತೆವಳುತ್ತಾ ನಡೆಯುತ್ತಿದ್ದ ಅನಾಥ ಅಜ್ಜಿಗೆ ಇದೀಗ ಆಶ್ರಮದ ಆಶ್ರಯ ಸಿಕ್ಕಿದೆ.
ಕಳೆದೆರಡು ತಿಂಗಳ ಹಿಂದೆ (ಮಾ.೧೬) ‘ನ್ಯೂಸ್ ನಾಟೌಟ್’ ಸಂಸ್ಥೆ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಅನಾಥ ಅಜ್ಜಿಯ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಿಸಿದ್ದರು. ಈ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಅನಾಥಾಶ್ರಮ ಆಡಳಿತ ಮಂಡಳಿಯವರು ನೇರವಾಗಿ ನ್ಯೂಸ್ ನಾಟೌಟ್ ಕಚೇರಿಯನ್ನು ಸಂಪರ್ಕಿಸಿ ನಮ್ಮ ಆಶ್ರಮಕ್ಕೆ ಅಜ್ಜಿಯನ್ನು ಕಳಿಸಿಕೊಡಿ ಚೆನ್ನಾಗಿ ನೋಡಿಕೊಳ್ತೇವೆ ಎಂದು ಕೇಳಿಕೊಂಡಿದ್ದರು.
ನಾವು ಕೂಡ ಗ್ರಾಮ ಪಂಚಾಯತ್ ತಂಡದೊಂದಿಗೆ ತೆರಳಿ ಅಜ್ಜಿಯನ್ನು ಮನವೊಲಿಸುವ ಕೆಲಸವನ್ನು ಮಾಡಿದ್ದೆವು. ಆದರೆ ಅಜ್ಜಿ ಹುಟ್ಟೂರು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಹಠ ಹಿಡಿದ ಮೇಲೆ ಸುಮ್ಮನಾಗಿದ್ದೆವು. ಆ ನಂತರವು ಅಜ್ಜಿಯನ್ನು ಮನವೊಲಿಸುವ ಕಾರ್ಯವನ್ನು ಸ್ಥಳೀಯರು ನಡೆಸಿದ್ದರು. ಕೊನೆಗೂ ಅಜ್ಜಿ ಹೊರಡುವ ನಿರ್ಧಾರಕ್ಕೆ ಬಂದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ (ರಿ) ಆಡಳಿತ ವರ್ಗದವರು ಅಜ್ಜಿಯನ್ನು ಕರೆದುಕೊಂಡು ಆಶ್ರಮಕ್ಕೆ ಹೋದರು. ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ .ಕೆ ಹನೀಫ್, ಪಿಡಿಒ ಸರಿತಾ, ವಿಆರ್ ಡಬ್ಲ್ಯು ಹರ್ಷಿತ್, ಸೇವಾ ಆಶ್ರಮದ ಸಣ್ಣಯ್ಯ, ಎಸ್ ಜೆ ಫಾರ್ಮ್ ವೇಣು ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಆದೇಶದ ಮೇರೆಗೆ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗಿದೆ.