ನ್ಯೂಸ್ ನಾಟೌಟ್: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡಗಳು ಸಂಭವಿಸುತ್ತಿರುವುದು ಇತ್ತೀಚೆಗೆ ಮಾಮೂಲಿಯಾಗಿ ಬಿಟ್ಟಿದೆ. ಈ ಹಿಂದೆ ಭೂಕಂಪ, ಜಲಪ್ರಳಯಕ್ಕೆ ಸಿಲುಕಿ ಅಲ್ಲಿನ ಜನ ನಲುಗಿ ಹೋಗಿದ್ದರು. ಈ ಕಹಿ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲಿ ಮತ್ತೊಂದು ಮಳೆಗಾಲ ಶುರುವಾಗಿದೆ. ಇದೀಗ ರಸ್ತೆಗೆ ಬೀಳುತ್ತಿರುವ ಬೃಹತ್ ಮರ, ಬಿದಿರಿನ ಕೊಂಬೆಗಳು ಪ್ರಯಾಣಿಕರ ಹಾಗೂ ಸ್ಥಳೀಯಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಪಾಜೆಯ ದಿವಂಗತ ಎನ್. ಎಸ್ ದೇವಿ ಪ್ರಸಾದ್ ಅವರ ಮನೆಗೆ ತಿರುಗುವ ಜಾಗದಲ್ಲಿ ಬೃಹತ್ ಮರ ಸಂಜೆ ಧರೆಗೆ ಉರುಳಿತ್ತು. ಹೀಗಾಗಿ ಬೆಂಗಳೂರು ಕಡೆಗೆ ಹಾಗೂ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದರು. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕಲ್ಲುಗುಂಡಿ ಸಮೀಪದ ಕಡಪಾಲ ಎಂಬಲ್ಲಿ ರಸ್ತೆಗೆ ಬಿದಿರಿನ ಗೊಂಚಲು ರಾಷ್ಟ್ರೀಯ ಹೆದ್ದಾರಿಗೆ ಉರುಳಿತ್ತು.
ಈ ಸಂದರ್ಭದಲ್ಲಿ ಸ್ಥಳೀಯರು ಮತ್ತೆ ಅದನ್ನೆಲ್ಲ ಸರಿಪಡಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಳೆಗಾಲದಲ್ಲಿ ಸಂಪಾಜೆ ಭಾಗದಲ್ಲಿ ಭೂಕುಸಿತ, ಜಲ ಪ್ರಳಯದಂತಹ ಕಠಿಣ ಸಂದರ್ಭ ಎದುರಾಗುತ್ತದೆ, ಇಂತಹ ಸನ್ನಿವೇಶದಲ್ಲಿ ಅದನ್ನು ನಿಭಾಯಿಸಲು ಪರ್ಯಾಯ ವ್ಯವಸ್ಥೆಗಳಿಲ್ಲ. ಹೀಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಸಂಪಾಜೆ ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು, ತುರ್ತು ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ನೆರವಾಗುವ ಕಾರ್ಯಕ್ರಮಗಳನ್ನು ಅಳವಡಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.