ನ್ಯೂಸ್ ನಾಟೌಟ್: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಸಂಪಾಜೆಯ ಜನರಿಗೆ ಈಗ ಪ್ರತಿನಿತ್ಯ ವಿದ್ಯುತ್ ಸಮಸ್ಯೆಯದ್ದೇ ದೊಡ್ಡ ಸವಾಲಾಗಿದೆ. ಸತತ ಎರಡು ದಿನಗಳಿಂದ ಊರಿಗೆ ಊರೇ ಕರೆಂಟ್ ಇಲ್ಲದೆ ಒದ್ದಾಟ ನಡೆಸುವಂತಾಗಿದೆ.
ತಿಂಗಳಾನುಗಟ್ಟಲೆಯಿಂದ ಇದೇ ರೀತಿ ವಿದ್ಯುತ್ ಸಂಪಾಜೆಯಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವುದಕ್ಕೆ ಶುರು ಮಾಡಿಕೊಂಡಿದೆ. ಜನರು ಕತ್ತಲೆಯಲ್ಲಿ ಪರದಾಡುವುದಲ್ಲದೆ ಸೊಳ್ಳೆಗಳ ಭಯಾನಕ ಕಡಿತಕ್ಕೆ ಸಿಲುಕಿ ರಾತ್ರಿ ನಿದ್ದೆ ಬಾರದೆ ಹೈರಾಣಾಗಿದ್ದಾರೆ. ಒಂದೆಡೆ ಮಳೆ, ಮತ್ತೊಂದು ಕಡೆ ಫ್ಯಾನ್ ಹಾಗೂ ಕಾಯಿಲ್ ಹಾಕಲಾಗದೆ ಜನರ ಒದ್ದಾಟ ಮಾತ್ರ ಯಾರಿಗೂ ಬೇಡವಾಗಿದೆ. ಇದೆಲ್ಲದರ ಅನುಭವ ಇಲ್ಲದಿರುವ ವಿದ್ಯುತ್ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಸ್ಪಂದನೆ ನೀಡದೆ ನೆಮ್ಮದಿಯಿಂದ ಮಲಗಿದ್ದಾರೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ದಕ್ಷಿಣ ಕನ್ನಡ ಸಂಪಾಜೆಯ ಕಲ್ಲುಗುಂಡಿ ತನಕ ಸುಳ್ಯದಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಕೊಡಗು ಸಂಪಾಜೆ ತನಕ ಮಡಿಕೇರಿಯಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಿದ್ದರೂ ಎರಡೂ ಕಡೆ ಕೂಡ ವಿದ್ಯುತ್ ಸಮಸ್ಯೆಗಳು ಪದೇಪದೇ ಎದುರಾಗುತ್ತಿರುವುದು ವಿಪರ್ಯಾಸವೇ ಸರಿ. ಇಂದು ಬರುತ್ತದೆ.. ನಾಳೆ ಬರುತ್ತದೆ ಎನ್ನುವ ಉತ್ತರ ಮೇಲಾಧಿಕಾರಿಗಳಿಂದ ಸಿಗುತ್ತಿದೆ. ಆದರೆ ಭರವಸೆಯೊಂದಿಗೆ ಕಾಯುತ್ತಿರುವ ಜನರ ನಿರೀಕ್ಷೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇದಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕಿದೆ.