ನ್ಯೂಸ್ ನಾಟೌಟ್: ತಾನು ನೆಟ್ಟು ಬೆಳೆಸಿದ ಬಾಳೆ, ಕೊಕ್ಕೊ ಗಿಡಗಳನ್ನು ಕಡಿದು ನಾಶಗೊಳಿಸಿದ ಬಗ್ಗೆ ವ್ಯಕ್ತಿಯೊಬ್ಬರು ತನ್ನ ಮಗಳ ವಿರುದ್ಧವೇ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಕರಣವು ಸುಳ್ಯ ತಾಲೂಕಿನ ಸಂಪಾಜೆಯ ಗಡಿಕಲ್ಲು ಎಂಬಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ಪೊಲೀಸರು ಜೀವ ಬೆದರಿಕೆ, ಅಕ್ರಮ ಪ್ರವೇಶ ಸೇರಿದಂತೆ ಕಲಂ 447, 427,504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ರಾಹಿಂ (86 ವರ್ಷ) ಎಂಬುವವರು ತಮ್ಮ ನಾಲ್ಕನೇ ಮಗಳಾದ ಆಯಿಷತ್ ಪೌಮ್ಯ ವಿರುದ್ಧ ದೂರು ನೀಡಿದ್ದಾರೆ. ದೂರಿನ ಸಾರಾಂಶ ಹೀಗಿದೆ. ‘ನನಗೆ ಸೇರಿದ ವಾಣಿಜ್ಯ ಕಟ್ಟಡವೊಂದು ಸುಳ್ಯದ ಗಾಂಧೀನಗರದಲ್ಲಿದೆ. ಈ ಕಟ್ಟಡವನ್ನು ಕಳೆದ ಎರಡು ವರ್ಷಗಳ ಹಿಂದೆ ಜಿಪಿಎ ಮಾಡಿ ಮತ್ತು ಲೀಸ್ ಎಗ್ರಿಮೆಂಟ್ ಮಾಡಿ ನೋಡಿಕೊಳ್ಳಲು ಮಗಳಿಗೆ ಕೊಟ್ಟಿದ್ದೇನೆ, ಅದರ ವಾಯಿದೆ ಮುಗಿದ ಬಳಿಕ ನಾನೇ ಆ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುವುದಾಗಿ ಹೇಳಿದಾಗ ದ್ವೇಷ ಕಾರಲು ಆರಂಭಿಸಿದ್ದಾರೆ. ಪ್ರಸ್ತುತ ಆ ಕಟ್ಟಡವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಈ ಸಿಟ್ಟಿನಿಂದ ಆಯಿಷತ್ ದಿನಾಂಕ 1-5-2024 ರಂದು ಸಂಜೆ ಸುಮಾರು 6 ಗಂಟೆಗೆ ಅವಳ ಮನೆಯ ಬಳಿ ಇರುವ ಕೊನೆಯ ಮಗಳು ಜೈಬುನ್ನೀಸಾಳದ ತೋಟದಲ್ಲಿದ್ದ ಸ್ಪಿಂಕ್ಲರ್ ಅನ್ನು ಹಾನಿ ಮಾಡಿದ್ದಲ್ಲದೆ 2-5-2024 ರಂದು ನನ್ನ ತೋಟಕ್ಕೆ ಅಕ್ರಮವಾಗಿ ನುಗ್ಗಿ ಬಾಳೆ ಗಿಡಗಳನ್ನು ಕೊಕ್ಕೋ ಮರಗಳನ್ನು ಕಡಿದು ಸ್ಪಿಂಕ್ಲರ್ ಅನ್ನು ನಾಶ ಮಾಡಿದ್ದಾರೆ. ಮಾತ್ರವಲ್ಲ 3-5-2024 ರಂದು ರಾತ್ರಿ 11 ಗಂಟೆಗೆ ಬಂದು ಮನೆಯ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.