ನ್ಯೂಸ್ ನಾಟೌಟ್: ಸಂಪಾಜೆಯ ಗಡಿಕಲ್ಲಿನಲ್ಲಿ ಮಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಪ್ಪನ ವಿರುದ್ಧವೂ ಇದೀಗ ಮಗಳು ಜೀವ ಬೆದರಿಕೆಯ ದೂರು ದಾಖಲಿಸಿದ್ದಾಳೆ. ಇದರೊಂದಿಗೆ ತಂದೆ -ಮಗಳ ನಡುವಿನ ಗಲಾಟೆ ತಾರಕ್ಕೇರಿದಂತಾಗಿದೆ. ಮಗಳು ಪೂರ್ವಾದ್ವೇಷ ಇಟ್ಟುಕೊಂಡು ಕೃಷಿ ವಸ್ತುಗಳನ್ನು ಸ್ಪಿಂಕ್ಲರ್ ಸೆಟ್ ಅನ್ನು ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಹಾಳು ಮಾಡಿದ್ದಾಳೆಂದು ಇಬ್ರಾಹಿಂ ಎನ್ನುವ ಸಂಪಾಜೆಯ ವ್ಯಕ್ತಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿಗೆ ಇದೀಗ ಮಗಳು ಆಯಿಷತುಲ್ ಪೌಮ್ಯ ಪ್ರತಿ ದೂರು ನೀಡಿದ್ದಾಳೆ.
ಏನಿದೆ ದೂರಿನಲ್ಲಿ..? ಆಯಿಷತುಲ್ ಪೌಮ್ಯ ಆಗಿರುವ ನಾನು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗಡಿಕಲ್ಲು ಎಂಬಲ್ಲಿ ತನ್ನ ಹೆಸರಿನಲ್ಲಿರುವ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದೇನೆ. ಪಕ್ಕದ ಇನ್ನೊಂದು ಮನೆಯಲ್ಲಿ ತಂದೆ ಇಬ್ರಾಹಿಂ ಮತ್ತು ತಾಯಿ ಅಮೀನಾ ಎಸ್ . ಎಂ ವಾಸವಾಗಿದ್ದಾರೆ. ದಿನಾಂಕ 7-5-2024 ರಂದು ಸಂಜೆ 7 ಗಂಟೆಗೆ ತಂದೆ ಇಬ್ರಾಹಿಂ ಹಾಗೂ ತಾಯಿ ಅಮೀನಾ ಎಸ್ .ಎಂ ಮನೆಗೆ ಕಾನೂನು ಬಾಹಿರವಾಗಿ ಸಮಾನ ಉದ್ದೇಶದಿಂದ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು “ನೀನು ಇನ್ನು ಮುಂದೆ ಈ ಮನೆಯಲ್ಲಿ ಅಥವಾ ಸಂಪಾಜೆಯಲ್ಲಿ ವಾಸವಾಗಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಮತ್ತು ನೀನು ಈ ಮನೆಯಲ್ಲಿ ಹೇಗೆ ವಾಸವಾಗಿರುತ್ತಿ.. ಎಂದು ಬೆದರಿಕೆ ಒಡ್ಡಿದ್ದಾರೆ.
ಮಾತ್ರವಲ್ಲ ಮನೆಗೆ ಬರುವ ಗೇಟಿಗೆ ಬೀಗ ಹಾಕಿ ಹೋಗಿದ್ದಾರೆ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಲಪಟಾಯಿಸುವ ಕಾರಣದಿಂದ ಒಂದಲ್ಲ ಒಂದು ರೀತಿಯಲ್ಲಿ ನನಗೆ ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ತಂದೆ-ತಾಯಿ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.