ನ್ಯೂಸ್ ನಾಟೌಟ್: ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣನವರನ್ನು ಎಸ್ಐಟಿ ಬಂಧಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಹೊಳೆನರಸೀಪುರ ತಾಲೂಕು ಕೇಂದ್ರದಲ್ಲಿ ಭಾನುವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಆನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ.
ಆ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಚ್ ಡಿ ರೇವಣ್ಣ ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯ ವಿಚಾರಣೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಸಿದ್ಧತೆ. ಸದ್ಯಕ್ಕೆ ಬೆಂಗಳೂರಿನ ಸಾಂತ್ವನ ಕೇಂದ್ರದಲ್ಲಿರುವ ಮಹಿಳೆ. ಮಹಿಳೆಯನ್ನು ಸಿಐಡಿ ಕಚೇರಿಯಲ್ಲಿರುವ ಎಸ್ ಐಟಿ ಕಚೇರಿಗೆ ಕರೆತಂದು ವಿಚಾರಣೆ ನಡೆಸುವ ಸಾಧ್ಯತೆ.
ಮೊದಲು ಮಹಿಳೆಗೆ ಕೌನ್ಸಿಲಿಂಗ್ ನಡೆಸಿ ಆನಂತರ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳ ನಿರ್ಧಾರ. ನಾಳೆ (ಮೇ 6) ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಲ್ಲಿಸಲು ವಕೀಲರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ರೇವಣ್ಣನವರನ್ನು ಬಂಧಿಸಿರುವ ಎಸ್ಐಟಿ ಪರ ವಕೀಲರು, ರೇವಣ್ಣ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಿದ್ದಾರೆ.