ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಗುಡುಗು -ಸಿಡಿಲಿನಿಂದ ಆಗುವ ಅನಾಹುತಗಳು ಹೆಚ್ಚುತ್ತಿವೆ. ಅದರಲ್ಲೂ ಜೀವ ಹಾನಿಯಂತಹ ಗಂಭೀರ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಗುಡುಗು- ಮಿಂಚಿನಿಂದ ಪಾರಾಗೋದು ಹೇಗೆ..? ಸಂಭವನೀಯ ಅಪಾಯಗಳಿಂದ ರಕ್ಷಣೆ ಪಡೆಯುವುದು ಹೇಗೆ..? ಅನ್ನುವುದರ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
ಜನರ ಹಿತದೃಷ್ಟಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದೆ. ಈ ಪ್ರಕಾರವಾಗಿ ನೋಡುವುದಾದರೆ ಗುಡುಗು -ಮಿಂಚು ಹೆಚ್ಚು ಇರುವ ಸಮಯದಲ್ಲಿ ಯಾರೂ ಕೂಡ ಮರಗಳ ಕೆಳಗೆ ನಿಲ್ಲಬಾರದು, ಮಿಂಚು ಹೆಚ್ಚಾಗಿ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳನ್ನು ಆಕರ್ಷಿಸುತ್ತದೆ. ಹೀಗಾಗಿ ಅಂತಹ ವಸ್ತುಗಳಿಂದ ದೂರವಿರಿ. ಅರಣ್ಯ ಪ್ರದೇಶದ ಒಳಗೆ ನೀವು ಇದ್ದರೆ ಕೂಡಲೇ ಸಣ್ಣ ಅಥವಾ ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯಿರಿ.
ಗುಡುಗು ಮಿಂಚು ಬಂದಂತಹ ಸಂದರ್ಭದಲ್ಲಿ ಲೋಹದ ವಸ್ತುಗಳನ್ನು ಬಳಸೋದಕ್ಕೆ ಹೋಗಬೇಡಿ. ಬೈಕ್ , ವಿದ್ಯುತ್ ಅಥವಾ ದೂರವಾಣಿ ಕಂಬಗಳು ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಬೇಕು.
ಸಿಡಿಲು ಹೆಚ್ಚುತ್ತಿರುವ ಸಂದರ್ಭದಲ್ಲಿ ಯಾರೂ ಕೂಡ ಮೊಬೈಲ್ ಫೋನ್ ಬಳಕೆ ಮಾಡಬೇಡಿ , ಸಿಡಲು ಬರುವಂತಹ ಸಂದರ್ಭದಲ್ಲಿ ಸ್ನಾನದ ಮನೆಗೆ ಹೋಗಬೇಡಿ. ಕಟ್ಟಡದ ಲೋಹದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಅಪಾಯವಿದೆ. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಕೂಡ ಬಳಸಬಾರದು.
ಇನ್ನು ಪಾತ್ರಗಳನ್ನು ತೊಳೆಯುವುದು, ಬಟ್ಟೆ ತೊಳೆಯುವುದು, ಬೈಕ್ ಗಳಲ್ಲಿ ಸಂಚಾರ ಮಾಡುವುದು ಅಥವಾ ತೆರೆದ ವಾಹನಗಳಲ್ಲಿ ಸಂಚಾರ ಮಾಡಬಾರದು.
ಉಳಿದಂತೆ ಆಟದ ಮೈದಾನ, ಉದ್ಯಾನವನ, ಈಜುಕೊಳ, ಕಡಲ ತೀರಗಳಿಗೆ ಹೋಗಬಾರದು, ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದ ರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲ. ಹೀಗಾಗಿ ಇವುಗಳಿಂದಲೂ ದೂರವಿರುವುದು ಒಳ್ಳೆಯದು.
ವಿದ್ಯುತ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್ ಟಾಪ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೋನ್, ವಾಷಿಂಗ್ ಮೆಷಿನ್, ಸ್ಟವ್ ಹಾಗೂ ಇತರ ವಿದ್ಯುತ್ ಉಪಕರಣಗಳ ಸಂಪರ್ಕ ಕಡಿತಗೊಳಿಸಬೇಕು.