ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಮತ್ತೊಂದು ಪತ್ರ..! ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲಿ ರಾಜಕೀಯ ಕೆಸರೆರಚಾಟ

ನ್ಯೂಸ್ ನಾಟೌಟ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸಿದೆ. ‘ಸಂಸದ ಪ್ರಜ್ವಲ್‌ ಅವರು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗುವ ಕೆಲವೇ ಗಂಟೆಗಳ ಮೊದಲು 2024ರ ಏಪ್ರಿಲ್‌ 27ರಂದು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ದೇಶ ತೊರೆದು ಜರ್ಮನಿಗೆ ಓಡಿಹೋಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ‘ಪ್ರಜ್ವಲ್‌ ಆರೋಪಿಯಾಗಿರುವ ಪ್ರಕರಣದ ಕುರಿತು ತಮ್ಮ ಗಮನ ಸೆಳೆಯಲು ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆ. ಈ ಪ್ರಕರಣವು ರಾಜ್ಯದ ಜನರ ಆತ್ಮಸಾಕ್ಷಿಯನ್ನು ಘಾಸಿಗೊಳಿಸಿರುವುದಷ್ಟೇ ಅಲ್ಲದೆ, ದೇಶದಾದ್ಯಂತ ಕಳವಳಕ್ಕೆ ಕಾರಣವಾಗಿದೆ’ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ತ್ವರಿತ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಂಡು ಪ್ರಜ್ವಲ್ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ಮನವಿ ಮಾಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಸ್‌ಐಟಿ ಈ ಮೊದಲೇ ಒಂದು ಪತ್ರ ಬರೆದಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ದೂರಿದ್ದಾರೆ.