ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಭಾರೀ ಕೋಲಾಹಲ ಎಬ್ಬಿಸಿದೆ. ಈ ಸಂಬಂಧ ಗುರುವಾರ(ಮೇ.9) ಹೆಚ್ಡಿಕೆ ನೇತೃತ್ವದ ಜೆಡಿಎಸ್ ನಿಯೋಗವು ರಾಜ್ಯಪಾಲರಿಗೆ ದೂರು ನೀಡಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮಧ್ಯಪ್ರವೇಶ ಮಾಡುವಂತೆ ಹೆಚ್ ಡಿಕೆ ರಾಜ್ಯಪಾಲರನ್ನು ಕೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ವೇಳೆ ಹೆಚ್ಡಿಕೆಗೆ ಕೆಲ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಸಾಥ್ ನೀಡಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು. ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಕುಮಾರಸ್ವಾಮಿಯವರು ಪೆನ್ಡ್ರೈವ್ ಪ್ರಕರಣ ಸಂಬಂಧ ಕಳೆದ ಒಂದು ವಾರದಿಂದ ಆದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ. ಇನ್ನು ವಿಡಿಯೋ ಬಿಡುಗಡೆ ಮಾಡಿದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿದ್ದು, ಅವನಿಗೆ ಸರ್ಕಾರದಿಂದಲೇ ರಾಜ ಮರ್ಯಾದೆ ಸಿಗುತ್ತಿದೆ. ಇದರ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇದೆ. ಕೈವಾಡ ಇರೋ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಎಸ್ ಐಟಿ ಇಂದ ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತಿಲ್ಲ ಎಂದು ರಾಜ್ಯಪಾಲರ ಮುಂದೆ ಹೆಚ್ಡಿಕೆ ಆರೋಪಿಸಿದ್ದಾರೆ ಎನ್ನಲಾಗಿದೆ.