ಪಕ್ಕದ ಮನೆಯ ಹೆಗ್ಗಣಗಳ ಉಪದ್ರಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ ವ್ಯಕ್ತಿ..! ಪೊಲೀಸರು ಮನೆಗೆ ಬಂದು ಮಾಡಿದ್ದೇನು..?

ನ್ಯೂಸ್ ನಾಟೌಟ್: ಹೆಗ್ಗಣಗಳಿಂದ ಮುಕ್ತಿ ನೀಡುವಂತೆ ಹಳೆ ಹುಬ್ಬಳ್ಳಿಯ ಆನಂದ ನಗರ ನಿವಾಸಿ ಅನಿಲ್ ಮುಂಡರಗಿ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಅನಿಲ್ ಮುಂಡರಗಿ ಪಕ್ಕದ ಮನೆಯಲ್ಲಿರುವ ಹಗ್ಗೆಣಗಳಿಂದ ನಮಗೆ ನೆಮ್ಮದಿ ಹಾಳಾಗಿದೆ. ಹೆಗ್ಗಣಗಳು ನಮ್ಮ ಮನೆಯಲ್ಲಿನ ಗ್ಯಾಸ್ ಪೈಪ್ ಲೈನ್, ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಎಲ್ಲೆಂದರಲ್ಲಿ ನೆಲ ಅಗೆದು ಮಣ್ಣು ಹೊರ ಹಾಕುತ್ತಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ರಂಧ್ರಗಳು ಬಿದ್ದಿವೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರತಿದಿನ 15 ರಿಂದ 20 ಹೆಗ್ಗಣಗಳು ಕಾಟ ಕೊಡುತ್ತಿವೆ. ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಸಿಲಿಂಡರ್ ಸೋರಿಕೆಯಾಗಿ ಅನಾಹುತವಾದರೆ ಯಾರು ಹೊಣೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ದೂರು ಆಧರಿಸಿ ಪೊಲೀಸರು ಅನಿಲ್​ ಅವರ ಪಕ್ಕದ ಮನೆಯ ಮಾಲೀಕ ಸಿದ್ದು ಅಂಗಡಿ ಎಂಬುವರನ್ನು ಕರೆಯಿಸಿ, ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ ಎನ್ನಲಾಗಿದೆ.