- +91 73497 60202
- [email protected]
- November 22, 2024 5:48 PM
ಪಂಜುರ್ಲಿ ದೈವದ ಅಭಯ ನಿಜವಾಯ್ತಾ..? ಅಂಡರ್ ವರ್ಲ್ಡ್ ಲಿಂಕ್ ಇದ್ದ ಕೊಲೆ ಆರೋಪಿ 1 ವರ್ಷದ ಬಳಿಕ ತಾನೇ ಬಂದು ಶರಣಾದ..!
ನ್ಯೂಸ್ ನಾಟೌಟ್: ತುಳುನಾಡಿನಲ್ಲಿ ದೈವಾಲಯಗಳೇ ನ್ಯಾಯಾಲಯ. ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿ ಕಷ್ಟ ಪರಿಹರಿಸಿದ ದೈವಗಳ ಪವಾಡ ಎಲ್ಲೋ ಒಮ್ಮೊಮ್ಮೆ ಸುದ್ದಿಯಾಗುತ್ತಿರುತ್ತವೆ. ಮಗನನ್ನು ಕಳೆದುಕೊಂಡು ೧ ವರ್ಷದಿಂದ ಕಣ್ಣೀರು ಸುರಿಸುತ್ತಿದ್ದ ತಾಯಿಗೆ ವರ್ತೆ ಪಂಜುರ್ಲಿ ದೈವ ನೇಮೋತ್ಸವದಲ್ಲಿ ಅಭಯ ನೀಡಿತ್ತು. “ಕೊಲೆ ಪಾತಕಿ ಎಲ್ಲೇ ಅವಿತ್ತಿದ್ದರೂ ಕಣ್ಣ ಮುಂದೆ ತಂದು ನಿಲ್ಲಿಸುತ್ತೇನೆ” ಎಂಬ ದೈವದ ಅಭಯ ಈಗ ನಿಜವಾಗಿದೆ. ಪೊಲೀಸರಿಗೂ ಸಿಗದೆ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದವ ದೈವದ ಅಭಯದ ಬಳಿಕ ತಾನೇ ಬಂದು ಗೆಳೆಯನ ಕೊಂದ ಆರೋಪಿ ಕೋರ್ಟ್ ಮುಂದೆ ಶರಣಾಗಿ ಅಚ್ಚರಿ ಮೂಡಿಸಿದ್ದಾನೆ. ಫೆಬ್ರವರಿ 5, 2023 ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಚೂರಿ ಇರಿತಕ್ಕೆ ಒಳಪಟ್ಟು ಶರತ್ ಶೆಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದರು. ಗೆಳೆಯರೇ ಅವರನ್ನು ಊರಿನ ದೈವ ನೇಮೋತ್ಸವದ ಸ್ಥಳದಿಂದ ಹೊರಗೆ ಕರೆದು ರಸ್ತೆ ಬದಿಯಲ್ಲಿ ಡ್ರ್ಯಾಗರ್ ನಿಂದ ಚುಚ್ಚಿ ಕೊಂದು ಹಾಕಿದ್ದರು. ಸ್ಥಳದಿಂದ ಆರು ಆರೋಪಿಗಳು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೈವ ಭಕ್ತನಾಗಿ 30 ವರ್ಷಗಳಿಂದ ಮನೆಯಲ್ಲಿ ವರ್ತೆ ಪಂಜುರ್ಲಿ ದೈವದ ಸೇವೆ ಮಾಡಿಕೊಂಡಿದ್ದ ಶರತ್ ಸಾವು ಇಡೀ ಕುಟುಂಬವನ್ನು ದಿಗ್ಭ್ರಮೆ ಮಾಡಿತ್ತು. ಮಾರ್ಚ್ 2023ರಲ್ಲಿ ಮನೆಯಲ್ಲಿ ನೇಮೋತ್ಸವ ಸೇವೆ ಕೊಟ್ಟು ಕುಟುಂಬ ನೋವು ಹೇಳಿಕೊಂಡು ಕಣ್ಣೀರಿಟ್ಟಿತ್ತು. ಕೊಂದ ಆರೋಪಿ ಎಲ್ಲೂ ಹೋಗುವುದಿಲ್ಲ. ಆತನೇ ಬಂದು ಶರಣಾಗುತ್ತಾನೆ ನೋಡಿ ಎಂದು ವರ್ತೆ ಪಂಜುರ್ಲಿ ಅಭಯ ನೀಡಿತ್ತು. ದೈವದ ಮಾತು ಈಗ ನಿಜವಾಗಿದೆ. ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಾನೇ ತಾನಾಗಿ ಬಂದು ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಅಂಡರ್‌ವರ್ಲ್ಡ್ ಲಿಂಕ್ ಹೊಂದಿದ್ದ ಈ ಕೊಲೆಯಲ್ಲಿ ಎಲ್ಲಾ ಪ್ರಮುಖ ಐದು ಮಂದಿ ಆರೋಪಿಗಳು ಶರಣಾಗಿದ್ದರೂ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದ ಈಗ ಅವನು ಶರಣಾಗಿದ್ದು ಕುಟುಂಬಕ್ಕೆ ಸ್ವಲ್ಪ ಸಮಾಧಾನ ತಂದಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸುತ್ತಿದ್ದರು. ಭೂ ವ್ಯವಹಾರದಲ್ಲಿ ಉಂಟಾದ ಸಂಘರ್ಷವೇ ಕೊಲೆಗೆ ಕಾರಣವಾಗಿತ್ತು ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ