ನ್ಯೂಸ್ ನಾಟೌಟ್: ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಇನ್ನು ಮುಂದೆ ಕಡ್ಡಾಯವಾಗಿ ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಲೇಬೇಕು. ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಸಿಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರ್ ದೇವೋಸ್ವಂ ಬೋರ್ಡ್ (ಟಿಡಿಬಿ) ತಿಳಿಸಿದೆ. ವರ್ಚ್ಯುವಲ್ ಕ್ಯೂ ಪದ್ಧತಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಇಚ್ಛಿಸುವ ಭಕ್ತರು, ದೇವಸ್ಥಾನ ಅಧಿಕತ ವೆಬ್ ಸೈಟ್ (ಶಬರಿಮಲ ಆನ್ ಲೈನ್ ಸರ್ವೀಸಸ್) ನಲ್ಲಿ ಅಥವಾ ಕೇರಳ ರಾಜ್ಯ ಸರ್ಕಾರದ ಶಬರಿಮಲ ಶ್ರೀ ಧರ್ಮಶಾಸ್ತ್ರ ಟೆಂಪಲ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ‘ವರ್ಚ್ಯುವಲ್ ಕ್ಯೂ’ ಗಾಗಿ ಇರುವ ಐಕಾನ್ ಕ್ಲಿಕ್ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು.
ವೆಬ್ ಸೈಟ್ ಗಳು ಬೇರೆ ಬೇರೆಯಾದರೂ ವರ್ಚ್ಯುವಲ್ ಕ್ಯೂ ಪುಟ ಮಾತ್ರ ಒಂದೇ ಆಗಿದೆ. ದೇವಸ್ಥಾನ ಆಡಳಿತ ಮಂಡಳಿಯ ಈ ನಿರ್ಧಾರ ಅನೇಕ ಭಕ್ತರಿಗೆ ನಿರಾಸೆ ತಂದಿದೆ. ಇದಲ್ಲದೆ, ಭಕ್ತರಿಗಾಗಿ ದೇವಸ್ಥಾನದ ಪ್ರಾಂಗಣಗಳಲ್ಲಿ ಉಚಿತ ಸೇವೆಗಳನ್ನು ನೀಡುವ ಹಲವಾರು ಸಂಘ, ಸಂಸ್ಧೆಗಳಿಗೂ ಅಸಮಾಧಾನ ತಂದಿದೆ. ಆದರೆ, ಅತ್ತ, ಟಿಡಿಬಿ ಮಾತ್ರ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ದೇವಸ್ಥಾನದಲ್ಲಿ ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಪಾರ ಸಂಖ್ಯೆಯ ಭಕ್ತರು ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಆಗಮಿಸಿದರೆ ಭಕ್ತರನ್ನು ಹಾಗೂ ಅಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿಯೇ ಈ ನಿರ್ಧಾರ (ವರ್ಚ್ಯುವಲ್ ಕ್ಯೂ ಪದ್ಧತಿ) ಅನಿವಾರ್ಯವಾಗಿದೆ ಎಂದು ಮಂಡಳಿ ತಿಳಿಸಿದೆ.
ದೇವಸ್ಥಾನದಲ್ಲಿ ಭಕ್ತಾದಿಗಳ ನಿರ್ವಹಣೆಗಾಗಿ ತಿರುಪತಿ ಮಾಡೆಲ್ ಅನುಸರಿಸಲಾಗಿತ್ತು. ಆದರೂ, ಭಕ್ತಾದಿಗಳು ಕ್ಯೂಗಳನ್ನು ಜಂಪ್ ಮಾಡಿ, ಮುಂದೆ ಇರುವ ಭಕ್ತರ ಜೊತೆಗೆ ಹೋಗಿ ಸೇರಿಕೊಳ್ಳುವುದು ಇತ್ಯಾದಿಗಳು ನಡೆದು ಸಾಕಷ್ಟು ಆಭಾಸಗಳಿಗೆ ಕಾರಣವಾಯಿತು. ಅಪಾರ ಸಂಖ್ಯೆಯ ಭಕ್ತರನ್ನು ನಿರ್ವಹಿಸಲು ಆ ಮೊದಲೇ ಕೈಗೊಳ್ಳಲಾಗಿದ್ದ ಎಲ್ಲಾ ಕ್ರಮಗಳೂ ವ್ಯರ್ಥವಾಗಿದ್ದವು. ಆ ಹಿನ್ನೆಲೆಯಲ್ಲಿ, ವರ್ಚ್ಯುವಲ್ ಕ್ಯೂ ಪದ್ಧತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಕಡ್ಡಾಯಗೊಳಿಸಿದೆ.