ನ್ಯೂಸ್ ನಾಟೌಟ್: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಅಭ್ಯರ್ಥಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದ ಘಟನೆ ನಡೆದಿದೆ. ರಾಜಸ್ಥಾನದ ಬಾರ್ಮರ್ನಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಿವುಡ್ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾರ್ಮರ್ ನ ಅಂತ್ರಿ ದೇವಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಅನಿತಾ ಚೌಧರಿ ಭಾನುವಾರ ಗೋಪಾಲ ರಾಮ್ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳಾದ ಲೇಖ್ರಾಜ್ ಸಿಯಾಗ್ ಮತ್ತು ಡಿಎಸ್ಟಿ ಇನ್ಚಾರ್ಜ್ ಮಹಿಪಾಲ್ ಸಿಂಗ್ ಕೂಡಲೇ ಸ್ಥಳಕ್ಕೆ ಧಾವಿಸಿ ಕೃಷ್ಣ ರಾಮ್ ಅವರ ಪುತ್ರ ಭಗೀರಥ ರಾಮ್ ವಿಷ್ಣೋಯ್ ಮತ್ತು ಆತನ ಕಿರಿಯ ಸಹೋದರ ಗೋಪಾಲ ರಾಮ್ನನ್ನು ಪರೀಕ್ಷಾ ಕೇಂದ್ರದಿಂದ ಬಂಧಿಸಿದ್ದಾರೆ.
ಭಗೀರಥ ರಾಮ್ ವಿಷ್ಣೋಯ್ ಜೋಧಾಪುರ ಎಸ್.ಎನ್.ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ನ ಮೊದಲ ಸೆಮಿಸ್ಟರ್ನಲ್ಲಿ ಓದುತ್ತಿದ್ದಾನೆ ಎನ್ನಲಾಗಿದೆ. ಭಗೀರಥ ರಾಮ್ ವಿಷ್ಣೋಯ್ ಆಧಾರ್ ಕಾರ್ಡ್ನಲ್ಲಿರುವ ತನ್ನ ಫೋಟೊವನ್ನು ಎಡಿಟ್ ಮಾಡಿ ಅದರ ಬದಲಿಗೆ ಸಹೋದರ ಗೋಪಾಲ ರಾಮ್ ಫೋಟೊ ಎಡಿಟ್ ಮಾಡಿ ನೀಟ್ ಪರೀಕ್ಷೆ ಬರೆಯಲು ತೆರಳಿದ್ದ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಕಿಲಾಡಿ ಸಹೋದರರ ಕ್ರಿಮಿನಲ್ ಐಡಿಯಾ ಸಾಂಗವಾಗಿ ನೆರವೇರುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಇವರ ಅದೃಷ್ಟ ಕೈಕೊಟ್ಟಿತ್ತು. ಪ್ರಾಂಶುಪಾಲೆಗೆ ಇಬ್ಬರ ಪರಿಚಯವಿತ್ತು ಮತ್ತು ಅನಿರೀಕ್ಷಿತವಾಗಿ ಪ್ರಾಂಶುಪಾಲೆಯ ಕಣ್ಣಿಗೆ ಬಿದ್ದು ಇವರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ .