ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ ಎಂದು ಹೇಳಲಾಗುತ್ತಿರುವ ರಾಸಲೀಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾಜಕೀಯ ಮೇಲಾಟಗಳು ನಡೆಯುತ್ತಿವೆ. ಇದೀಗ ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
“ಹಾಸನದ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ. ಈ ಗಂಭೀರ ಪ್ರಕರಣದ ಬಗ್ಗೆ ನಿಮಗೂ ತಿಳಿದಿರಬಹುದು. ಅವರ ವಿರುದ್ಧದ ಆರೋಪಗಳು ಭಯಾನಕ ಮತ್ತು ನಾಚಿಕೆ ಗೇಡಿನದ್ದು, ಇದು ದೇಶದ ಆತ್ಮ ಸಾಕ್ಷಿಯನ್ನೇ ಅಲ್ಲಾಡಿಸಿದ ಪ್ರಕರಣವಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಎಸ್ ಐಟಿ ರಚನೆ ಮಾಡಿದೆ. ಎಸ್ಐಟಿ ತಂಡ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ. ಪ್ರಕರಣ ಹೊರ ಬಿದ್ದ ಕೂಡಲೇ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ. ಅವರು ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲೆ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದೆ. ಎಸ್ ಐಟಿ ತನಿಖೆ ನಡೆಯುತ್ತಿರುವ ಸಂಬಂಧ ರೇವಣ್ಣ ಈ ದೇಶಕ್ಕೆ ವಾಪಾಸ್ ಕರೆತರಬೇಕು.
ದೇಶದ ಕಾನೂನಿನ ಪ್ರಕಾರ ತನಿಖೆ ವಿಚಾರಣೆ ನಡೆಸಬೇಕು. ಹಾಗಾಗಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿ, ಅಲ್ಲದೆ ಅಂತರಾಷ್ಟ್ರೀಯ ಏಜೆನ್ಸಿ ಮೂಲಕ ಪ್ರಜ್ವಲ್ ರೇವಣ್ಣ ಕರೆತರಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಕೂಡ ಸೂಚನೆ ನೀಡಬೇಕು. ಪ್ರಜ್ವಲ್ ಕರೆತರಲು ಬೇಕಾದ ಎಲ್ಲಾ ರೀತಿಯ ನೆರವು ಹಾಗೂ ಮಾಹಿತಿಯನ್ನು ನಮ್ಮ ಎಸ್ ಐಟಿ ತಂಡ ಒದಗಿಸಲಿದೆ, ಸಹಕರಿಸಲಿದೆ” ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಿ ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲಿ ಭಾರತದಿಂದ ಜರ್ಮನಿಗೆ ತೆರಳಿದ್ದು, ನವೆಂಬರ್ ತನಕ ವೀಸಾವಿಲ್ಲದೆ ಕೆಲವು ದೇಶಗಳಿಗೆ ಪ್ರಯಾಣಿಸುವ ಅವಕಾಶ ರಾಜತಾಂತ್ರಿಕ ಪಾಸ್ಪೋರ್ಟ್ ಗಿದೆ.