ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿಯ ಶೈಲಿಯಲ್ಲೇ ಮಾತನಾಡುತ್ತ, ಜೋಕ್ಗಳನ್ನು ಮಾಡುತ್ತ ಖ್ಯಾತಿ ಗಳಿಸಿದ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ (Shyam Rangeela) ಈಗ ವಾರಾಣಸಿ (Varanasi) ಲೋಕಸಭೆ ಕ್ಷೇತ್ರದಲ್ಲಿ ನರೇಂದ್ರ ಮೋದಿ (Narendra Modi) ವಿರುದ್ಧವೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ರಾಜಸ್ಥಾನದವರಾದ 29 ವರ್ಷದ ಶ್ಯಾಮ್ ರಂಗೀಲಾ ಅವರು ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರನ್ನು ಮಿಮಿಕ್ರಿ ಮಾಡುತ್ತ ಖ್ಯಾತಿ ಗಳಿಸಿದ್ದಾರೆ. ಇವರ ಹಾಸ್ಯಪ್ರಜ್ಞೆಯನ್ನೂ ಜನ ಮೆಚ್ಚಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ಪರಿಚಿತರಾಗಿದ್ದಾರೆ. “ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ನಾನು ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಮುಂದಿನ ವಾರ ನಾನು ವಾರಾಣಸಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ” ಎಂದು ಹೇಳಿದರು. ನರೇಂದ್ರ ಮೋದಿ 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಇವರ ವಿರುದ್ಧ ಈ ಬಾರಿ ಕಾಂಗ್ರೆಸ್ ಅಜಯ್ ರಾಯ್ ರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್ ಮಹಾಮಂಡಲೇಶ್ವರ್ ಹೇಮಾಂಗಿ ಸಖಿ ಕೂಡ ಸ್ಪರ್ಧಿಸುತ್ತಿದ್ದಾರೆ. ಈಗ ಬಿಎಸ್ಪಿಯು ಅಥರ್ ಜಮಾಲ್ ಲರಿ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.