ನ್ಯೂಸ್ ನಾಟೌಟ್: ಬೆಂಗಳೂರು: ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ನಿಗದಿತ ಅವಧಿ ಮೀರಿ ತಂಗುವ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ದಂಡ ವಿಧಿಸಿದೆ. ಪರ್ಪಲ್ ಲೈನ್ನಲ್ಲಿ ಬರುವ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದುಕೊಂಡಿದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಮೊಬೈಲ್ನಲ್ಲಿ ಚಾರ್ಜ್ ಇಲ್ಲದ ಕಾರಣ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲೇ ಚಾರ್ಜಿಂಗ್ ಮಾಡಿಕೊಳ್ಳುತ್ತಿದ್ದರು. ಚಾರ್ಜಿಂಗ್ ಬಳಿಕ ಹೊರಡಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ತಡೆದ ನಮ್ಮ ಮೆಟ್ರೋ ಸಿಬ್ಬಂದಿ, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಪ್ರಯಾಣಿಕ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ, “ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೇವಲ 20 ನಿಮಿಷ ಮಾತ್ರ ಇರಲಷ್ಟೇ ಅವಕಾಶ ಇದೆ. ಅದಕ್ಕಿಂತ 1 ನಿಮಿಷ ಹೆಚ್ಚು ಕಾಲ ಇದ್ದರೂ ದಂಡ ಪಾವತಿ ಮಾಡಲೇಬೇಕು” ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. “ಹೊರಗೆ ಮಳೆ ಸುರಿಯುತ್ತಿದ್ದು, ಮೊಬೈಲ್ನಲ್ಲಿ ಚಾರ್ಜ್ ಇರಲಿಲ್ಲ. ಹೀಗಾಗಿ, ನಿಲ್ದಾಣದಿಂದ ಹೊರಡುವುದು ತಡವಾಗಿದೆ,” ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಆದಾಗ್ಯೂ, ದಂಡ ವಸೂಲು ಮಾಡಲಾಗಿದೆ. ಈ ನಿಯಮ ಈ ಹಿಂದೆಯೂ ಇತ್ತು ಎಂದು ನಮ್ಮ ಮೆಟ್ರೋ ಹೇಳಿಕೊಂಡಿದೆ.
Click 👇