ನ್ಯೂಸ್ ನಾಟೌಟ್: ಇಬ್ಬರು ಯುವಕರು ಗೃಹಿಣಿಯೊಬ್ಬಳಿಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದು, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಷಯಕ್ಕೆ ಮನನೊಂದು ಎ.27 ರಂದು ಸಂತ್ರಸ್ತೆ ತನ್ನ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜಿಲ್ಲೆ ವಿಜಯಪುರದ ಬಸವನಬಾಗೇವಾಡಿ ತಾಲೂಕಿನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಅತ್ಯಾಚಾರ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 32 ವರ್ಷದ ಗೃಹಿಣಿಯನ್ನು ಅದೇ ಗ್ರಾಮದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಜೀವಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆಕಾಶ ಹಡಗಲಿ ಹಾಗೂ ಅಭಿಷೇಕ ಸಜ್ಜನ ಎಂಬ ಇಬ್ಬರು ಗೃಹಿಣಿಯನ್ನು ಬೆದರಿಸಿ ಆಕಾಶ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರ ಘಟನೆಯನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ಅತ್ಯಾಚಾರ ಹಾಗೂ ವಿಡಿಯೋ ಮಾಡಿರುವುದನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹಂಚುವುದಾಗಿ ಹಾಗೂ ಕೊಲೆ ಮಾಡಿ ಶವವೂ ಸಿಗದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಸದರಿ ಲೈಂಗಿಕ ದೌರ್ಜನ್ಯದ ವಿಡಿಯೋ ಬೇರೆ ಊರಿನಲ್ಲಿ ನೆಲೆಸಿರುವ ಸಂತ್ರಸ್ತೆಯ ಸಹೋದರನ ಮೊಬೈಲ್ ಗೂ ಹರಿದು ಹೋಗಿದೆ. ಕೂಡಲೇ ಸಂತ್ರಸ್ತೆಯ ಸಹೋದರ ತನ್ನ ತಾಯಿಗೆ ವಿಡಿಯೋ ತೋರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕೃತ್ಯ ಮನೆಯವರಿಗೆ ಗೊತ್ತಾಗುತ್ತಲೇ ಸಂತ್ರಸ್ತೆ ತನ್ನ 6 ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ. ಈ ಕುರಿತು ಏ.27 ರಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.