ನ್ಯೂಸ್ ನಾಟೌಟ್: ಮಲಯಾಳಂನಲ್ಲಿ ಇತ್ತೀಚೆಗೆ ತೆರೆಕಂಡ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಚಿತ್ರ ಭಾರೀ ಜನಮೆಚ್ಚುಗೆ ಪಡೆಯುತ್ತಿದ್ದಂತೆ ಅದಕ್ಕೆ ಕಾಫಿರೈಟ್ ಕಂಟಕ ಎದುರಾಗಿದೆ. ಈ ಚಿತ್ರದಲ್ಲಿ ತಾವು ಸಂಗೀತ ಸಂಯೋಜನೆ ಮಾಡಿದ್ದ ‘ಕಣ್ಮಣಿ’ ಹಾಡನ್ನು ಬಳಸಲಾಗಿದೆ ಎಂದು ಸಂಗೀತ ಮಾಂತ್ರಿಕ ಇಳಯರಾಜ ಕಾನೂನು ಸಮರ ಸಾರಿದ್ದಾರೆ.
ತಮ್ಮ ಹಾಡು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಚಿತ್ರದ ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೊಡು…’ ಹಾಡು ಗಮನ ಸೆಳೆದಿತ್ತು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ.
ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ಕಡೆಯಿಂದ ನೋಟಿಸ್ ಹೋಗಿದೆ. ಹಾಡನ್ನು ಅಕ್ರಮವಾಗಿ ಬಳಕೆ ಮಾಡಲಾಗಿದ್ದು, ಇಳಯರಾಜ ಅವರು ಈ ಹಾಡಿನ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಸಂಗೀತ ಸಂಯೋಜಕರ ಅನುಮತಿ ಪಡೆಯಿರಿ ಅಥವಾ 15 ದಿನಗಳಲ್ಲಿ ಪರಿಹಾರವನ್ನು ಪಾವತಿಸುವಂತೆ ಜೊತೆಗೆ ಚಿತ್ರದಿಂದ ಹಾಡನ್ನು ತೆಗೆದು ಹಾಕುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Click 👇