ನ್ಯೂಸ್ ನಾಟೌಟ್: ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣದ ಹೊರಗೆ ನಡೆದ ಹೊಡೆದಾಟ ಮತ್ತು ತೀವ್ರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ತಳ್ಳಾಟ, ನೂಕಾಟ ನಡೆದಿದ್ದು, ಮಹಿಳೆಯರು ಎಂಬುದನ್ನೂ ನೋಡದೆ ಅಸಭ್ಯವಾಗಿ ವರ್ತಿಸಿ ರಿಕ್ಷಾ ಚಾಲಕರು ಹೊಡೆದಾಟಕ್ಕಿಳಿದಿರುವುದು ಬೆಳಕಿಗೆ ಬಂದಿದೆ.
ಬುಧವಾರ(ಮೇ 8) ಬೆಳಗ್ಗೆ 7. 30ಕ್ಕೆ ಚೆನ್ನೈನಿಂದ ದಂಪತಿ ಬಂದಿದ್ದು, ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಲು ಸ್ಥಳೀಯರಾದ ಇಬ್ಬರು ಬಂದಿದ್ದರು. ರೈಲ್ವೇ ನಿಲ್ದಾಣದಲ್ಲಿ ಪ್ರಸ್ತುತ ವ್ಯವಸ್ಥೆಯ ಪ್ರಕಾರ, ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು ಮತ್ತು ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ಕಾಯದೆ ಮುಖ್ಯ ಗೇಟ್ನ ಮುಂದೆ ಪಿಕಪ್ ಮತ್ತು ಡ್ರಾಪ್ ಅನ್ನು ಮಾತ್ರ ಅನುಮತಿಸಲಾಗುತ್ತದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬ ವ್ಯಕ್ತಿ ಮತ್ತು ದಂಪತಿಯನ್ನು ಕರೆದುಕೊಂಡು ಹೋಗಲು ಬಂದ ಇಬ್ಬರು ವ್ಯಕ್ತಿಗಳ ನಡುವೆ ಸಣ್ಣ ಮಟ್ಟದ ವಾಗ್ವಾದ ನಡೆದಿದೆ. ನಂತರ ವಾದವನ್ನು ನೋಡಿ ಚಂದನ್ ಬೆಂಬಲವಾಗಿ ಆಟೋರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಆ ಬಳಿಕ ವಿಡಿಯೋದಲ್ಲಿ ಕಂಡು ಬಂದಿರುವಂತೆ ವಾಗ್ವಾದ ತಾರಕಕ್ಕೇರಿದ್ದು, ತಳ್ಳಾಟ ನೂಕಾಟ ನಡೆದಿದೆ. ಆಟೋ ಚಾಲಕರ ಗುರುತನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರ ಗುರುತನ್ನೂ ಪರಿಶೀಲಿಸಲಾಗುತ್ತಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.