ನ್ಯೂಸ್ ನಾಟೌಟ್: ಮಂಗಳೂರು, ಮೇ 22: ದೇಶವೇ ನಡುಗಿದ್ದ ಭೀಕರ ಮಂಗಳೂರು ವಿಮಾನ ದುರಂತ ನಡೆದು ಇಂದಿದೆ(ಮೇ.22) 14 ವರ್ಷ ಕಳೆದಿದೆ. ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿತ್ತು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿತ್ತು.
ಇಂದು ಬೆಳಗ್ಗೆ ಜಿಲ್ಲಾಡಳಿತ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಗೌರವ ನಮನ ಸಲ್ಲಿಸಿದೆ. 2010ರ ಮೇ 22ರ ಬೆಳಗ್ಗೆ 6:20ಕ್ಕೆ ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದ ಸಮೀಪದ ಕೆಂಜಾರಿನಲ್ಲಿ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿದ್ದ ಪೈಲಟ್, ಸಿಬ್ಬಂದಿ ಸಹಿತ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಬದುಕಿ ಉಳಿದಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುಷ್ಪಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ , ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್, ಸಂತ್ರಸ್ತರ ಕುಟುಂಬದ ಸದಸ್ಯರಾದ ಶೊಭಾ ಶೆಟ್ಟಿ, ಶ್ರೇಯಾ ಮೊದಲಾದವರು ಉಪಸ್ಥಿತರಿದ್ದರು.
Click 👇