ನ್ಯೂಸ್ ನಾಟೌಟ್: ಸಸ್ಯ ಸಂಪತ್ತಿನಿಂದ ಕಂಗೊಳಿಸುವ ಕೊಡಗಿನ ಸಿರಿಯನ್ನೇ ಮರ ಕಳ್ಳರು ಹಗಲು ದರೋಡೆ ಮಾಡಿದ್ದಾರೆ. ತಲಕಾವೇರಿ ಅಭಯಾರಣ್ಯದ ವಿರಾಜಪೇಟೆ ವಲಯದ ಮುಂಡ್ರೋಡು ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದ್ದು ಪರಿಸರ ಪ್ರೇಮಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನುವ ಗಂಭೀರ ಆರೋಪಗಳು ಕೂಡ ಕೇಳಿ ಬಂದಿದೆ.
ಈ ಬಗ್ಗೆ ಸ್ವತಃ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ ನೀಡಿದ್ದಾರೆ. ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಮರ ಕಡಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದ್ದಾರೆ.
239 ಮರಗಳನ್ನು ಕಡಿದ ವಿಚಾರವಾಗಿ ಏಪ್ರಿಲ್ 30 ರಂದು ಮೂವರ ವಿರುದ್ಧ ಮುಂಡ್ರೋಟು ರೇಂಜ್ ಫಾರೆಸ್ಟ್ ಆಫೀಸರ್ ಪ್ರಕರಣ ದಾಖಲಿಸಿದ್ದರು. ಆದರೆ, ಕೊಡಗು ಏಕೀಕರಣ ರಂಗದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿದ್ದರು. ಮರ ಕಡಿದ ವಿಚಾರವಾಗಿ ಸಮಗ್ರ ಪರಿಶೀಲನೆಗಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ತಕ್ಷಣವೇ ನಿಯೋಜಿಸಬೇಕು ಮತ್ತು ಮೂರು ದಿನಗಳಲ್ಲಿ ಜಿಪಿಎಸ್ ಟ್ಯಾಗ್ ಮಾಡಿದ ವೀಡಿಯೊಗಳನ್ನು ಒಳಗೊಂಡಂತೆ ವಾಸ್ತವ ವರದಿಯನ್ನು ಸಲ್ಲಿಸಬೇಕು. ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
Click 👇