ನ್ಯೂಸ್ ನಾಟೌಟ್: ಇಷ್ಟು ದಿನ ಐಪಿಎಲ್ನಲ್ಲಿ ಮಾತ್ರ ಬೆಟ್ಟಿಂಗ್ ನಡೆಯುತ್ತಿತ್ತು. ಆದರೆ ಈಗ ವಕೀಲರಿಬ್ಬರು ಲೋಕಸಭಾ ಚುನಾವಣೆಯ ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ ಬೆಟ್ಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮೇ 7ರಂದು 3ನೇ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಉತ್ತರ ಪ್ರದೇಶದ ಬದೌನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಇಬ್ಬರು ನೆಚ್ಚಿನ ಅಭ್ಯರ್ಥಿಗಳ ಮೇಲೆ ವಕೀಲರಿಬ್ಬರು ತಲಾ 2 ಲಕ್ಷ ರೂ. ಬಾಜಿ ಕಟ್ಟಿದ್ದಾರೆ.
ಉತ್ತರ ಪ್ರದೇಶದ ಬದೌನ್ ಕ್ಷೇತ್ರದಲ್ಲಿ ವಕೀಲ ಸತ್ಯೇಂದ್ರ ಪಾಲ್ ಮತ್ತು ವಕೀಲ ದಿವಾಕರ್ ವರ್ಮಾ ಬೆಟ್ಟಿಂಗ್ ದಾರರಾಗಿದ್ದಾರೆ ಎನ್ನಲಾಗಿದೆ. ಸತ್ಯೇಂದ್ರ ಪಾಲ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿತ್ಯ ಯಾದವ್ ಮೇಲೆ, ದಿವಾಕರ್ ವರ್ಮಾ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಶಾಕ್ಯಾ ಅವರು ಲೀಡ್ನಲ್ಲಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಇದರಲ್ಲಿ ಸೋತವರು ಮತ್ತೊಬ್ಬ ವಕೀಲರಿಗೆ 2 ಲಕ್ಷ ರೂ. ನೀಡುವುದಾಗಿ ಬೆಟ್ಟಿಂಗ್ ಕಟ್ಟಿದ್ದಾರೆ. ಇದನ್ನೂ ಲೀಗಲ್ ಮಾಡಿದ್ದು, ನಾಲ್ವರು ಸಾಕ್ಷಿಗಳ ಸಹಿಯೊಂದಿಗೆ ಅಫಿಡವಿಟ್ ಸಹ ಮಾಡಿಸಿದ್ದಾರೆ.
3ನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್ಪುರಿ, ಇಟಾಹ್, ಬದೌನ್, ಬರೇಲಿ ಮತ್ತು ಅಯೋನ್ಲಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿಯಾಗಿ ಕಣಕ್ಕಿಳಿದಿದ್ದರೆ, ಸಮಾಜವಾದಿ ಪಕ್ಷವು ಚುನಾವಣೆಗಾಗಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದೆ. ಈಗ ಇಲ್ಲಿ ವಕೀಲರ ಬೆಟ್ಟಿಂಗ್ ಭಾರಿ ಸುದ್ದಿ ಮಾಡುತ್ತಿದೆ ಮತ್ತು ಈ ಬಗ್ಗೆ ಕ್ರಮಕೈಗೊಳ್ಳಲು ಆಗ್ರಹ ಹೆಚ್ಚಾಗಿದೆ.