ನ್ಯೂಸ್ ನಾಟೌಟ್: ಏರ್ ಇಂಡಿಯಾ ಎಕ್ಸ್ಪ್ರೆಸ್ನ ಸುಮಾರು 300 ಉದ್ಯೋಗಿಗಳು ಸಾಮೂಹಿಕ ಅನಾರೋಗ್ಯ ರಜೆ ಹಾಕಿ ತಮ್ಮ ಫೋನ್ಗಳನ್ನು ಸ್ವಿಚ್ಡ್ ಆಫ್ ಮಾಡಿದ್ದರಿಂದಾಗಿ ಉಂಟಾದ ವಿಮಾನ ಸೇವೆಯಲ್ಲಿನ ಭಾರಿ ವ್ಯತ್ಯಯದ ಮಾರನೆಯ ದಿನ 30 ಮಂದಿ ಕ್ಯಾಬಿನ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್, ಇನ್ನಿತರರಿಗೆ ಗಡುವು ನೀಡಿದೆ ಎನ್ನಲಾಗಿದೆ.
ವಜಾಗೊಳ್ಳಲಿರುವ ಸಿಬ್ಬಂದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇನ್ನಿತರ ಉದ್ಯೋಗಿಗಳಿಗೆ ಇಂದು ಸಂಜೆ ನಾಲ್ಕು ಗಂಟೆಯೊಳಗಾಗಿ ಕರ್ತವ್ಯಕ್ಕೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಗಡುವು ನೀಡಲಾಗಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ. ಸಣ್ಣ ಸ್ವರೂಪದಲ್ಲಿ ಕಾಣಿಸಿಕೊಂಡ ಈ ಬಿಕ್ಕಟ್ಟು, ಈಗ ಪೂರ್ಣ ಪ್ರಮಾಣದ ಬಿಕ್ಕಟ್ಟಿಗೆ ತಿರುಗಿರುವುದರಿಂದ ಇಂದು(ಮೇ.೦೯) ಈ ವೈಮಾನಿಕ ಸೇವಾ ಸಂಸ್ಥೆಯ ಒಟ್ಟು 76 ವಿಮಾನ ಯಾನಗಳು ರದ್ದುಗೊಂಡಿವೆ.
ಏರ್ ಇಂಡಿಯಾ ಎಕ್ಸ್ಪ್ರೆಸ್, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಅಂಗ ಸಂಸ್ಥೆಯಾಗಿದ್ದು, ಸದ್ಯ ಇಂದು ಟಾಟಾ ಸಮೂಹದ ಒಡೆತನದಲ್ಲಿದೆ. ಉದ್ಯೋಗಿಗಳು ನೂತನ ಉದ್ಯೋಗ ನೇಮಕಾತಿ ಷರತ್ತುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಬ್ಬಂದಿಗಳ ಉಪಚಾರದಲ್ಲಿ ಸಮಾನತೆಯ ಕೊರತೆ ಇದೆ ಎಂದು ವಿಮಾನ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ.