ನ್ಯೂಸ್ ನಾಟೌಟ್: ಬಾಲ್ಯ ವಿವಾಹದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕುಂದಾಪುರದ ಶಂಕರನಾರಾಯಣ ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಬಟ್ಟು ನಿವಾಸಿ ಭರತ್ ಶೆಟ್ಟಿ ಬಂಧಿತರು ಎನ್ನಲಾಗಿದೆ. 17 ವರ್ಷ 8 ತಿಂಗಳಾಗಿದ್ದ ಯುವತಿಯನ್ನು ಸಂತ್ರಸ್ತೆಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ಮೇ 21ರಂದು ವಿವಾಹ ಮಾಡಿಸಿದ್ದಾರೆ.
ಈ ಮದುವೆಗೆ ತಾಯಿಯ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ ಎನ್ನಲಾಗಿದೆ. ಆಪ್ತ ಸಮಾಲೋಚನೆಯ ನಂತರ ನೊಂದ ಯುವತಿ ಬಾಲ್ಯ ವಿವಾಹದ ಬಗ್ಗೆ ದೃಢಪಡಿಸಿದ್ದು ಅವಳ ಜನ್ಮ ದಿನಾಂಕ 25-09-2006 ಆಗಿದ್ದು ಮದುವೆಯಾದ ದಿನಕ್ಕೆ 17 ವರ್ಷ 8 ತಿಂಗಳು ಮಾತ್ರವೇ ಆಗಿದ್ದು, 18 ವರ್ಷ ಪೂರ್ಣಗೊಂಡಿರಲಿಲ್ಲ ಎಂದು ತಿಳಿದುಬಂದಿದೆ. ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ದೀಪಾ ಬಂಗೇರರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
Click 👇