ನ್ಯೂಸ್ ನಾಟೌಟ್: ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ ಶುಕ್ರವಾರ ಬುಡಸಹಿತ ಧರೆಗುರುಳಿ ಬಿದ್ದಿದೆ. ಇದರೊಂದಿಗೆ ಸುಮಾರು 1,000 ವರ್ಷಗಳ ಇತಿಹಾಸವಿರುವ ಮರ ನೆಪಾಂತ್ಯಕ್ಕೆ ಸರಿದಿದೆ.
ಇತಿಹಾಸದ ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ ಬೆಳೆದು ನಿಂತಿದ್ದ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರಕ್ಕೆ ಸುಮಾರು 800ರಿಂದ 1,000 ವರ್ಷಗಳ ಹಿನ್ನೆಲೆ ಇದೆ ಎಂದು ಹೇಳಲಾಗುತ್ತಿದೆ. ಇದು ಅಧ್ಯಯನಗಳಿಂದಲೂ ದೃಢಪಟ್ಟಿದೆ ಎನ್ನುವ ಪ್ರತಿತಿಯೂ ಇದೆ.
ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿ ಕಾಂತಬಾರೆ- ಬೂದಬಾರೆಯರು ಇದ್ದರು ಅನ್ನುವುದು ಐತಿಹಾಸಿಕ ಸಾಕ್ಷಿಯಾದರೆ ಈ ಅವಳಿ ವೀರರು ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ನೇಲೆ (ಬಟ್ಟೆಯ ತೊಟ್ಟಿಲು)ಯಲ್ಲಿ ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ (ಪಡುವಣ-ಪಶ್ಚಿಮ) ಗೆಲ್ಲಿಗೆ ಅನ್ನುತ್ತದೆ ಇತಿಹಾಸ.