ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯನ್ನು ಗುರಿಯಾಗಿಸಿ ಮತ್ತೊಂದು ಭೀಕರ ಭಯೋತ್ಪಾದನಾ ದಾಳಿ ನಡೆದಿದೆ. ಭಾರತೀಯ ವಾಯು ಪಡೆಯ ಒಬ್ಬ ಯೋಧ ಮೃತಪಟ್ಟಿದ್ದು, ಇನ್ನೂ ಐವರು ಗಾಯಗೊಂಡ ಘಟನೆ ಇಂದು(ಮೇ.೫) ರಂದು ವರದಿಯಾಗಿದೆ. ಐಎಎಫ್ನ ಒಂದು ವಾಹನ ಸೇರಿದಂತೆ ಎರಡು ವಾಹನಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಾನ್ಕೋಟ್ ಪ್ರದೇಶದಲ್ಲಿ ಉಗ್ರರು ಭೀಕರ ಸ್ವರೂಪದ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಐವರಲ್ಲಿ, ವಾಯು ಸೇನೆಯ ಒಬ್ಬ ಯೋಧನ ಸ್ಥಿತಿ ಗಂಭೀರವಾಗಿದೆ.
ಅವರೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಉಧಾಂಪುರದ ಕಮಾಂಡ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಇಡೀ ಪ್ರದೇಶವನ್ನು ನಿರ್ಬಂಧಿಸಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ. ಐಎಎಫ್ನ ಗರುಡ ವಿಶೇಷ ಪಡೆಗಳು ಇಲ್ಲಿ ಕಾರ್ಯಾಚರಣೆಗೆ ಸನ್ನದ್ಧವಾಗಿದ್ದು, ಸೇನೆಯ ಹೆಚ್ಚುವರಿ ಪಡೆಗಳನ್ನು ಜರ್ರಾ ವಾಲಿ ಗಾಲಿಗೆ (ಜೆಡಬ್ಲ್ಯೂಜಿ) ರವಾನಿಸಲಾಗಿದೆ. ಶಾಹ್ಸಿತಾರ್ ಬಳಿ ದಾಳಿಗೆ ಒಳಗಾದ ತನ್ನ ಬೆಂಗಾವಲು ವಾಹನವನ್ನು ರಕ್ಷಿಸಲಾಗಿದೆ ಎಂದು ಐಎಎಫ್ ತಿಳಿಸಿದೆ. “ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಾಹ್ಸಿತಾರ್ ಸಮೀಪ ಉಗ್ರರು ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಸ್ಥಳೀಯ ಸೇನಾ ಘಟಕದಲ್ಲಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.