ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಪಟ್ಟಂತೆ ಮಹಿಳೆಯ ಅಪಹರಣದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಎಚ್ಡಿ ರೇವಣ್ಣರನ್ನು ನಾಲ್ಕು ದಿನಗಳ ಕಾಲ ಎಸ್ ಐಟಿ ವಶಕ್ಕೆ ಒಪ್ಪಿಸಲಾಗಿದೆ. ಶನಿವಾರ(ಮೇ.೪) ವಿಶೇಷ ತನಿಖಾ ತಂಡ (ಎಸ್ಐಟಿ) ಹೊಳೆನರಸೀಪುರ ಶಾಸಕ, ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು.
ಮೇ 4 ರಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ನಂತರ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿದ್ದರು. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಮನೆಯಲ್ಲಿ ಎಚ್ಡಿ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ಮಾಡಿದ್ದ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಭಾನುವಾರ ಕೋರ್ಟ್ ರಜೆ ಇರುವ ಕಾರಣ 17ನೇ ಎಸಿಎಂಎಂ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರ ನಿವಾಸದಲ್ಲೇ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ರೇವಣ್ಣ ಅವರನ್ನು ಮೇ 8ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ಮೈಸೂರು ಜಿಲ್ಲೆ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಎಚ್ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳಿವೆ ಎನ್ನಲಾದ ಪೆನ್ಡ್ರೈವ್ ಬಹಿರಂಗವಾದ ಬಳಿಕ ತಾಯಿ ನಾಪತ್ತೆಯಾಗಿದ್ದಾರೆ ಎಂದು 20 ವರ್ಷದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರಿನಲ್ಲಿ ಎರಡನೇ ಆರೋಪಿಯಾಗಿದ್ದ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿ ಸತೀಶ್ ಬಾಬು ಎನ್ನುವವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಎಚ್ಡಿ ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಪ್ರಜ್ವಲ್ ರೇವಣ್ಣ ಇಂದು(ಮೇ.೬) ಕೂಡ ಬರುವುದು ಅನುಮಾನ ಎನ್ನಲಾಗಿದ್ದು, ಅಧಿಕಾರಿಗಳು ಬಂಧನಕ್ಕಾಗಿ ನಿನ್ನೆ ಕಾದಿದ್ದರು ಆದರೆ ಪ್ರಜ್ವಲ್ ಬರಲಿಲ್ಲ. ಬೆಂಗಳೂರು – ಮಂಗಳೂರು ಏರ್ ಪೋರ್ಟ್ ಗಳ ಮೇಲೆ ಅಧಿಕಾರಿಗಳು ಪ್ರಜ್ವಲ್ ಬಂಧನಕ್ಕಾಗಿ ನಿಗಾ ಇರಿಸಿದ್ದಾರೆ.