ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಕಲ್ಪನೆಯನ್ನ ದೇಶಕ್ಕೆ ನೀಡಿದ್ರು. ಆದರೆ ನಮ್ಮ ವಿದ್ಯಾವಂತ ಸೋಕಾಲ್ಡ್ ಜನ ವರ್ಷಕ್ಕೊಮ್ಮೆ ‘ಸ್ವಚ್ಛ ಭಾರತ್’ ಆಚರಿಸಿ ಉಳಿದೆಲ್ಲ ದಿನ ಕಂಡಕಂಡಲ್ಲಿ ಕಸ ಎಸೆದು ಹೋಗೋದನ್ನ ನೋಡಿದ್ದೇವೆ. ಅದರಲ್ಲೂ ಕಾರುಗಳಲ್ಲಿ ಟ್ರಾವೆಲ್ ಮಾಡುವವರ ದರ್ಬಾರ್ ನೋಡಬೇಕು. ಒಂದು ಚೆಂದದ ಜಾಗ ಸಿಕ್ಕಿದ್ರೆ ಸಾಕು, ಅಲ್ಲಿ ಕಾರು ಪಾರ್ಕ್ ಮಾಡಿದ್ರು, ಸರಿಯಾಗಿ ತಿಂದು ತೇಗಿದ್ರು, ಕಸವನ್ನೆಲ್ಲ ಭೂ ತಾಯಿಯ ಒಡಲಿಗೆ ಎಸೆದು ಹೋದ್ರು.. ಇದು ನಮ್ಮ ‘ಸ್ವಚ್ಛ ಭಾರತ್’ ಕಲ್ಪನೆ ಅಲ್ವಾ..? ಪ್ರಕೃತಿ ಮಾತೆಯ ಒಡಲಿಗೆ ದ್ರೋಹ ಮಾಡಿ ಪರಿಸರ ನಾಶಕ್ಕೆ ಕಾರಣವಾಗೊ ಇಂತಹ ವಿದ್ಯಾವಂತ ಅವಿವೇಕಿಗಳಿಗೆ ಯಾವುದೇ ಕಾನೂನಿನ ಭಯವಿಲ್ಲ. ಇಂತಹವರಿಗೆ ಎಲ್ಲೋ ಕೆಲವು ಅಧಿಕಾರಿಗಳು ಮಾತ್ರ ಸಿಂಹ ಸ್ವಪ್ನರಾಗಿದ್ದಾರೆ. ಅಂತಹ ಅಧಿಕಾರಿಗಳ ಸಾಲಿಗೆ ಇದೀಗ ಉಬರಡ್ಕ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ರವಿಚಂದ್ರನ್ ಅನ್ನುವವರು ಸೇರಿಕೊಂಡಿದ್ದಾರೆ ಅನ್ನೋದು ಖುಷಿಯ ವಿಚಾರ.
ಬೆಂಗಳೂರು ಮೂಲದ ಕಾರು ಪ್ರಯಾಣಿಕರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಸಮೀಪದ ಉಬರಡ್ಕ ತಿರುಗುವಲ್ಲಿ ಕಸ ಎಸೆದು ಹೋಗಿದ್ದರು. ಈ ಕಸದ ರಾಶಿಯನ್ನ ಪರಿಶೀಲನೆ ನಡೆಸಿ ಒಂದಷ್ಟು ಮಾಹಿತಿ ಕಲೆ ಹಾಕಲಾಯಿತು. ಅದರಲ್ಲಿದ್ದ ವಿಳಾಸಕ್ಕೆ ದೂರವಾಣಿ ಮೂಲಕ ಸಂದೇಶ ತಿಳಿಸಲಾಗಿದೆ. ಕಸ ಎಸೆದಿರುವ ತಪ್ಪಿನ ಬಗ್ಗೆ ಮನವರಿಕೆ ಮಾಡಲಾಗಿದೆ. ದಂಡ ವಿಧಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರಿನ ಸುನಿಲ್ ಅನ್ನುವವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ನಾವು ಸುಳ್ಯ ಮೂಲಕ ಪ್ರಯಾಣಿಸುವಾಗ ಕಸ ಎಸೆದಿದ್ದೇವೆ. ನಮಗೆ ರವಿಚಂದ್ರನ್ ಅನ್ನುವ ಪಿಡಿಒ ಕರೆ ಮಾಡಿ ಐದು ಸಾವಿರ ರೂ. ದಂಡವನ್ನು ವಿಧಿಸುವಂತೆ ತಿಳಿಸಿದ್ದಾರೆ. ಅಧಿಕೃತವಾಗಿ ಇದನ್ನು ಪೋಸ್ಟ್ ಮೂಲಕ ಪತ್ರದಲ್ಲಿ ಕಳಿಸಿದ್ದಾರೆ. ಇದು ತಲುಪುತ್ತಿದ್ದಂತೆ ನಾವು ದಂಡ ಕಟ್ಟುತ್ತೇವೆ’ ಎಂದಿದ್ದಾರೆ. ಸದ್ಯ ಕಸದ ಫೋಟೋವನ್ನು ಬಿಜೆಪಿ ಹಿರಿಯ ಮುಖಂಡ ವಿನಯ್ ಕುಮಾರ್ ಕಂದಡ್ಕ “ಅಮರ ಸುಳ್ಯ ರಮಣೀಯ ಸುಳ್ಯ’ ಅನ್ನುವ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿನೋದ್ ಲಸ್ರಾಡೊ ಅನ್ನುವವರು ದಂಡದ ಬಗ್ಗೆ ಬಂದಿರುವ ಅಧಿಕೃತ ಸಂದೇಶವನ್ನು ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿರುವ ವಿನೋದ್ ಅವರು, ‘ಇದೊಂದು ಒಳ್ಳೆಯ ಬೆಳವಣಿಗೆ, ಸ್ವಚ್ಛತೆ ಬಗ್ಗೆ ನಾವು ಜನರಲ್ಲಿ ಅರಿವು ಮೂಡಿಸುತ್ತಾ ಬಂದಿದ್ದೇವೆ. ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಆದರೆ ನಮ್ಮ ಜನರು ಪರಿಸರಕ್ಕೆ ಹಾನಿಯಾಗುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತಹವರಿಗೆ ದಂಡದ ಮೂಲಕ ಎಚ್ಚರಿಕೆ ನೀಡುವ ಪಿಡಿಒ ಕಾರ್ಯ ಶ್ಲಾಘನೀಯ’ ಎಂದರು. ಗ್ರಾಮದಲ್ಲಿ ಒಬ್ಬ ಬಡವ ನನಗೆ ನಿಮ್ಮ ಸಹಿ ಬೇಕು, ಇಂತಹದ್ಧೊಂದು ಕೆಲಸ ಆಗಬೇಕು ಅಂತ ಪಿಡಿಒ ಅಧಿಕಾರಿ ಬಳಿ ಕೇಳಿದ್ರೆ ನೂರಾರು ಕಾನೂನುಗಳ ಬಗ್ಗೆ ಕೆಲವು ಪಿಡಿಓಗಳು ಮಾತನಾಡುವುದಿದೆ. ಸಹಿ ಹಾಕದೆ ಸತಾಯಿಸಿ ಬಡಪಾಯಿಯನ್ನು ಅಲೆದಾಡುವಂತೆ ಮಾಡೋರೂ ಇದ್ದಾರೆ. ಅಂತಹವರಿಗೆ ಸಾರ್ವಜನಿಕ ರಸ್ತೆಗಳಲ್ಲಿ ಕಸ ಹಾಕುವವರನ್ನು ಹಿಡಿದು ದಂಡ ವಿಧಿಸುವ ಧೈರ್ಯ ಇರೋದಿಲ್ಲ. ಆದರೆ ಎಲ್ಲೋ ಕೆಲವು ಪಿಡಿಒಗಳು ಇಂತಹ ದಿಟ್ಟತನ ಪ್ರದರ್ಶಿಸುತ್ತಾರೆ. ಅಂತಹ ಅಧಿಕಾರಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸೋಣ.