ನ್ಯೂಸ್ ನಾಟೌಟ್ : ʼಸ್ಕಿಜೋಫ್ರೇನಿಯಾʼ ಅನ್ನೋದು ಒಂದು ರೀತಿಯ ಮಾನಸಿಕ ಕಾಯಿಲೆ. ಇದರ ಸುಳಿಗೆ ಸಿಲುಕಿ ಹಲವು ಮಂದಿ ಬಳಲುತ್ತಿದ್ದಾರೆ. ಅಂದರೆ ನಮ್ಮ ಸುತ್ತಲಿನ ಮನಸ್ಸಿನ ಕಾಯಿಲೆಯನ್ನು ʼಸ್ಕಿಜೋಫ್ರೇನಿಯಾʼ ಅನ್ನಬಹುದು. ಇಲ್ಲದನ್ನೆಲ್ಲ ಮನಸ್ಸಿಗೆ ತಂದುಕೊಂಡು ಭ್ರಮೆಯಲ್ಲಿ ಬದುಕುವುದೇ ಈ ರೋಗದ ಪ್ರಮುಖ ಲಕ್ಷಣ. ಇದೆಲ್ಲದರ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಅನ್ನುಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸೈಕಾಲಜಿಸ್ಟ್ ತಜ್ಞೆ ನಮೃತಾ ಕುತ್ಯಾಳ ಬರೆದಿದ್ದಾರೆ. ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಈ ಲೇಖನವನ್ನು ಓದಿ.
ಪ್ರತಿ ವರ್ಷ ಮೇ24 ಅನ್ನು ʼವಿಶ್ವ ಸ್ಕಿಜೋಫ್ರೇನಿಯಾʼ ದಿನವನ್ನಾಗಿ ಆಚರಿಸಲಾಗುತ್ತದೆ . ಈ ಸ್ಥಿತಿಗೆ ಸಂಬಂಧಿಸಿದ ಕಳಂಕಗಳ ವಿರುದ್ಧ ಹೋರಾಡುವುದು ಮತ್ತು ಮಾನಸಿಕ ಅಸ್ವಸ್ಥತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಗುರಿಯಾಗಿದೆ. ಈ ವಿಶ್ವ ಸ್ಕಿಜೋಫ್ರೇನಿಯಾ ದಿನದಂದು, ಸ್ಕಿಜೋಫ್ರೇನಿಯಾದ ಕಾರಣಗಳು ಮತ್ತು ರೋಗಲಕ್ಷಣಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಜಾಗೃತಿಯನ್ನು ಹರಡೋಣ.
36 ವರ್ಷದ ವ್ಯಕ್ತಿಯೋರ್ವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು ತನ್ನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಕ್ರಮೇಣ ಆತನ ಚಟುವಟಿಕೆಗಳಲ್ಲಿ, ಯೋಚನಾಶಕ್ತಿಯಲ್ಲಿ ಬಹಳಷ್ಟು ಬದಲಾವಣೆಗಳು ಪ್ರಾರಂಭವಾಗುತ್ತದೆ. ತನ್ನ ಸಹೋದ್ಯೋಗಿಗಳ ಮೇಲೆ ವಿನಾಕಾರಣ ಅನುಮಾನ ಪಡಲು ಪ್ರಾರಂಭಿಸುತ್ತಾನೆ. ಅದೇ ವಾಸ್ತವ ಎಂದು ನಂಬುತ್ತಾನೆ. ಉದ್ಯೋಗ ತೊರೆದು ಮನೆಗೆ ಬಂದಾಗ ತನ್ನ ತಂದೆ ತಾಯಿಯ ಮೇಲೆ ಕೂಡ ವಿನಾಕಾರಣ ಅನುಮಾನ ಪ್ರಾರಂಭವಾಗುತ್ತದೆ. ತನ್ನನ್ನು ಕೊಲ್ಲುವುದಕ್ಕಾಗಿ ತನ್ನ ಊಟ ತಿಂಡಿಯಲ್ಲಿ ವಿಷ ಬೆರೆಸಿದ್ದಾರೆ ಎಂಬ ಭ್ರಮೆ ಪ್ರಾರಂಭವಾಗುತ್ತದೆ. ಹೀಗಾಗಿ ಹಿಂಸಾತ್ಮಕ ಪ್ರವೃತ್ತಿ ಹೊಂದುತ್ತಾನೆ. ತನ್ನಲ್ಲಿ ತಾನೆ ಮಾತಾಡಿಕೊಳ್ಳುವುದು. ತನ್ನಷ್ಟಕ್ಕೆ ನಗುವುದು. ಸ್ವಚ್ಚತೆಯ ಕಡೆಗೆ ಗಮನ ಹರಿಸದೇ ಬೇರೆಯವರನ್ನು ವಿನಾಕಾರಣ ಸಂಶಯ ಪಡುವುದು, ನಿದ್ದೆ ಇಲ್ಲದೆ ಇರುವುದು ಹೀಗೆ ತನ್ನದೇ ಆದ ಭ್ರಮೆಯಲ್ಲಿ ಇರುತ್ತಾನೆ. ಹಿಂಸಾತ್ಮಕ ಪ್ರವೃತ್ತಿಯನ್ನು ತಾಳಲಾರದೆ ಪೋಷಕರು ಪೊಲೀಸರಿಗೆ ದೂರನ್ನು ನೀಡುತ್ತಾರೆ. ಜೊತೆಗೆ ಜ್ಯೋತಿಷ್ಯ ಪೂಜೆ ಮಾಟ ಮಂತ್ರ ಹೀಗೆ ಎಲ್ಲಾ ಪ್ರಯತ್ನವನ್ನು ಮಾಡಿದರೂ ಎನೂ ಬದಲಾವಣೆ ಕಾಣುವುದಿಲ್ಲ. ಕೊನೆಗೆ ಮನೋವೈದ್ಯರ ಬಳಿ ಬಂದಾಗ ಸ್ಕಿಜೋಫ್ರೇನಿಯ ಎಂಬ ಕಾಯಿಲೆ ಇರುವುದಾಗಿ ಖಚಿತಪಡಿಸುತ್ತಾರೆ. ಇದೊಂದು ಉದಾಹರಣೆಯಷ್ಟೇ ಎಷ್ಟೋ ಜನ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೈನಂದಿನ ಸಣ್ಣ ಸಣ್ಣ ವಿಷಯಗಳೂ ಕೂಡ ಇವರಿಗೆ ದೊಡ್ಡ ಸವಾಲಿನಂತೆ ಕಾಣುತ್ತದೆ. ಸ್ಕಿಜೋಫ್ರೇನಿಯಾ ಗಂಭೀರ ಸ್ವರೂಪದ ಮಾನಸಿಕ ಕಾಯಿಲೆಯಾಗಿದ್ದು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಇದು ವಾಸ್ತವವನ್ನು ಅಸಹಜವಾಗಿ ಅರ್ಥೈಸುವಂತೆ ಮಾಡುತ್ತದೆ.
ಭ್ರಾಂತಿ – ಸ್ಕಿಜೋಫ್ರೇನಿಯಾ ರೋಗಿಗಳಿಗೆ ಮನೆಯವರು, ಸಂಬಂಧಿಕರು, ಸ್ನೇಹಿತರು ಅಥವಾ ಹೊರಗಿನವರು ತನ್ನ ವಿರುದ್ಧ ಪಿತೂರಿ ಮಾಡುತ್ತದ್ದಾರೆ ಮತ್ತು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ನಂಬುತ್ತಾರೆ.
ಯಾರೋ ಇಬ್ಬರು ವ್ಯಕ್ತಿಗಳು ಅಥವಾ ಗುಂಪಿನಲ್ಲಿ ಮಾತನಾಡುತ್ತಿದ್ದರೆ ಅಥವಾ ನಗುತ್ತಿದ್ದರೆ ಸ್ಕಿಜೋಫ್ರೇನಿಯಾ ರೋಗಿಗಳಿಗೆ ತನ್ನ ಬಗ್ಗೆ ಮಾತನಾಡುತ್ತಿದ್ದಾರೆ ತನ್ನನ್ನು ನೋಡಿ ನಗುತ್ತಿದ್ದಾರೆ ಎಂದು ಅನುಮಾನಿಸುತ್ತಾರೆ. ಗಂಡ ಹೆಂಡತಿಯರ ನಡುವೆ ವಿನಾಕಾರಣ ಸಂಶಯ ಪಡುವಂತದ್ದು ಗಂಡನಿಗೆ ಅಥವಾ ಹೆಂಡತಿಗೆ ಬೇರೆ ಅನೈತಿಕ ಸಂಬಂಧ ಇದೆ ಎಂದು ನಂಬುತ್ತಾರೆ.
ಭ್ರಮೆ – ಸ್ಕಿಜೋಫ್ರೇನಿಯಾ ರೋಗಿಗಳಿಗೆ ವಾಸ್ತವದಲ್ಲಿ ಇಲ್ಲದ ವ್ಯಕ್ತಿಗಳು ಅಂದರೆ ಯಾರೋ ಸಂಬಂಧಿಕರು , ಸ್ನೇಹಿತರು ಅಥವಾ ಇನ್ಯಾರದ್ದೋ ಪರಿಚಯ ಇಲ್ಲದೇ ಇರುವ ವ್ಯಕ್ತಿಗಳು ತನ್ನೊಂದಿಗೆ ಮಾತನಾಡುವ ಹಾಗೆ ಅನಿಸುವುದು, ಹಾಗಾಗಿ ಒಬ್ಬೊಬ್ಬರೇ ಮಾತನಾಡುವುದು. ನಗುವುದು ಹೀಗೆ ರೋಗಿಗಳ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಬಹುದು.
ರೋಗಿಯ ಮುಂದೆ ಇಲ್ಲದೇ ಇರುವಂತಹ ವಸ್ತುಗಳು ಅಥವಾ ದೃಶ್ಯಗಳು ಕಾಣಿಸುತ್ತದೆ, ಆದರೆ ಅದು ನೈಜವಾಗಿ ಇರುವುದಿಲ್ಲ. ಅದನ್ನೇ ನಿಜ ಎಂದು ವರ್ತಿಸುತ್ತಾರೆ. ರೋಗಿಗೆ ಮೊದಲಿನಂತೆ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೇ ಇರುವುದು. ತಾನು ಮಾಡುವ ಕೆಲಸದಲ್ಲಿ ಆಸಕ್ತಿ ಹಾಗೂ ಆನಂದ ಇಲ್ಲದೇ ಇರುವುದು ಹಾಗೂ ಕಡಿಮೆ ಮಾತನಾಡುವುದು.
ಒಂದೇ ಕಡೆ ಕುಳಿತುಕೊಳ್ಳುವುದು, ಹೊರಗಡೆ ಹೋಗದೆ ಇರುವುದು, ಸ್ವಚ್ಚತೆ ಕಡೆಗೆ ಗಮನ ಹರಿಸದೇ ಇರುವುದು. ಊಟ ಹಾಗೂ ನಿದ್ರೆ ಸರಿಯಾದ ರೀತಿಯಲ್ಲಿ ಮಾಡದೇ ಇರುವುದು. ಆತಂಕ/ಗಾಬರಿಯಿಂದ ಇರುವುದು. ತನಗೆ ಕಾಯಿಲೆ ಇದೆ ಎಂದು ಒಪ್ಪಿಕೊಳ್ಳದೇ ಇರುವುದು
ಇವುಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಪ್ರಾರಂಭದಲ್ಲಿ ಗುರುತಿಸಿ ಮನೋವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯವಾಗಿದೆ. ವೈದ್ಯರು ವೈದ್ಯಕೀಯ ಹಿನ್ನೆಲೆ, ಮಾನಸಿಕ ಆರೋಗ್ಯ ಉಂಟಾಗುತ್ತಿರುವ ಗೊಂದಲಮಯ ವಿಚಾರಗಳ ಬಗ್ಗೆ ವಿಚಾರಿಸಿ ಹಲವು ರೀತಿಯ ಪರೀಕ್ಷೆಗಳನ್ನು ಮಾಡಿ ರೋಗ ನಿರ್ಣಯ ಮಾಡುತ್ತಾರೆ.
ಸ್ಕಿಜೋಫ್ರೇನಿಯಾ ರೋಗಿಯ ಜೀವನದಲ್ಲಿ ಉಪಚಾರ ಮಾಡುವ ವ್ಯಕ್ತಿಗಳು ಮಹತ್ವದ ಪಾತ್ರ ವಹಿಸುತ್ತಾರೆ. ಔಷಧಿಗಳೊಂದಿಗೆ ಮಾಡುವ ಉಪಚಾರ ಮತ್ತು ನೀಡುವ ಬೆಂಬಲ ಸ್ಕಿಜೋಫ್ರೇನಿಯಾ ರೋಗಿಗಳು ಬೇಗನೆ ಗುಣಮುಖರಾಗಲು ಅತ್ಯಾವಶ್ಯಕವಾಗಿರುತ್ತದೆ. ಸ್ಕಿಜೋಫ್ರೇನಿಯಾ ರೋಗಿಗಳಿಗೆ ಕೆಳಗೆ ತಿಳಿಸಿದ ಹಲವಾರು ಸಂದರ್ಭಗಳಲ್ಲಿ ಸಹಾಯದ ಅಗತ್ಯವಿರುತ್ತದೆ. ಭ್ರಮೆ ಮತ್ತು ಭ್ರಾಂತಿಯನ್ನು ನಿಭಾಯಿಸಲು. ಚಿಕಿತ್ಸೆಗೆ ಉತ್ತೇಜನ ನೀಡಲು ಮತ್ತು ಬೆಂಬಲವಾಗಿ ನಿಲ್ಲಲು. ಸ್ಕಿಜೋಫ್ರೇನಿಯಾ ರೋಗಿಗಳು ಔಷಧ ತೆಗೆದುಕೊಳ್ಳುವುದನ್ನು ನಿರಾಕರಿಸಬಹುದು. ಅಥವಾ ಅನಿಯಮಿತವಾಗಿ ತೆಗೆದುಕೊಳ್ಳಬಹುದು. ಯಾಕೆಂದರೆ ಕೆಲವು ಸಂದರ್ಭಗಳಲ್ಲಿ ತಮಗೆ ಕಾಯಿಲೆ ಇದೆಯೆಂದು ಒಪ್ಪಿಕೊಂಡಿರುವುದಿಲ್ಲ ಹಾಗಾಗಿ ಔಷಧೋಪಚಾರಗಳ ಬಗ್ಗೆ ನಿಗಾ ವಹಿಸಲು. ಸ್ಕಿಜೋಫ್ರೇನಿಯಾ ರೋಗಿಗಳು ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಹಾಗಾಗಿ ಚಟುವಟಿಕೆಯನ್ನು ಕಂಡುಕೊಳ್ಳಲು ಸಹಾಯ ಮಾಡುವುದರಿಂದ ಇಂಥವರನ್ನು ಸಹ ಭವಿಷ್ಯದ ಬಗ್ಗೆ ಆಶಾವಾದಿ ವ್ಯಕ್ತಿಯನ್ನಾಗಿ ಮಾಡಬಹುದಾಗಿದೆ.