ನ್ಯೂಸ್ ನಾಟೌಟ್: ವೆಬ್ಸೈಟ್ಗಳು, ಆಪ್ಗಳು ಎಂದ ಮೇಲೆ ಕೆಲವೊಮ್ಮೆ ತಾಂತ್ರಿಕ ದೋಷ ನಿರ್ಮಾಣವಾಗುವುದು ಸಾಮಾನ್ಯ, ಆದರೆ ಆನ್ಲೈನ್ ಮಾರುಕಟ್ಟೆಗಳಲ್ಲಿ ಈ ರೀತಿ ತಾಂತ್ರಿಕ ದೋಷವಾದರೆ ಮಾಲೀಕರು ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತವೆ. ಮೆಕ್ಸಿಕೋದಲ್ಲಿ ಫೇಮಸ್ ಆಗಿರುವ ಆನ್ಲೈನ್ ಜ್ಯುವೆಲ್ಲರಿ ಪೂರೈಕೆದಾರ ಸಂಸ್ಥೆಯಾದ ಕರ್ಟಿಯರ್ ಆನ್ಲೈನ್ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಪರಿಣಾಮ ಅದರಲ್ಲಿದ್ದ ಡೈಮಂಡ್ ಹಾಗೂ ಚಿನ್ನದ ಆಭರಣಗಳ ಬೆಲೆ ಗ್ರಾಹಕರಿಗೆ ಬಹಳ ಕಡಿಮೆ ದರಕ್ಕೆ ತೋರಿಸಿದ್ದು, ಪರಿಣಾಮ ಇದರಿಂದ ಈ ವೆಬ್ಸೈಟ್ ಮಾತ್ರ ಭಾರಿ ಬೆಲೆ ತೆರಬೇಕಾಗಿ ಬಂದಿದೆ.
ಆದರೆ ಇತ್ತ ಗ್ರಾಹಕರೊಬ್ಬರು ಖುಷಿಯ ಜೊತೆ ಅಚ್ಚರಿಗೊಳಗಾಗಿದ್ದಲ್ಲದೇ ಅಲ್ಲಿ ವಜ್ರದ ಆಭರಣವನ್ನು ಮಾರುಕಟ್ಟೆಯ ಮೌಲ್ಯಕ್ಕಿಂತ ಬಹಳ ಕಡಿಮೆ ಬೆಲೆಗೆ ಖರೀದಿಸಿದ್ದಾರೆ. ಮೆಕ್ಸಿಕೋ ಮೂಲದ ರೊಜೆಲಿಯೊ ವಿಲ್ಲಾರ್ರಿಯಲ್ ಅವರು ಕೂಡ ಕಾರ್ಟಿಯರ್ನ ವೆಬ್ಸೈಟ್ನಲ್ಲಿ ದುಬಾರಿ ಬೆಲೆಯ ವಸ್ತುಗಳು ಕಡಿಮೆ ಬೆಲೆಗೆ ಕಾಣಿಸುವುದು ನೋಡಿ ಅಚ್ಚರಿಗೊಳಗಾಗಿದ್ದರು. ಇಲ್ಲಿ 18 ಕ್ಯಾರೆಟ್ನ ರೋಸ್ ಗೋಲ್ಡ್ ಸ್ಟಡ್ ಹೂಪ್ಸ್ 142 ಅದ್ಬುತ ಡೈಮಂಡ್ ಕಟ್ ಜೊತೆ ಎಂಬಿಡ್ ಆಗಿದ್ದು ಇದರ ಬೆಲೆ ವೆಬ್ಸೈಟ್ನಲ್ಲಿ ಕೇವಲ 13.85 ಡಾಲರ್ಗೆ (1,154.82 ಭಾರತೀಯ ರೂಪಾಯಿ) ಅಲ್ಲಿ ಕಾಣಿಸುತ್ತಿತ್ತು. ಆದರೆ ಈ ಐಷಾರಾಮಿ ಬ್ರಾಂಡ್ನ ಮೂಲ ಬೆಲೆ $14,000 ಡಾಲರ್ ( 1,166,896.66 ಭಾರತೀಯ ರೂಪಾಯಿ) ಆಗಿತ್ತು. ಈ ವಿಚಾರವನ್ನು ಸ್ವತಃ ರೊಜೆಲಿಯೊ ವಿಲ್ಲಾರ್ರಿಯಲ್ ಟ್ವಿಟ್ಟರ್ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ. ಬರೀ ಇಷ್ಟೇ ಅಲ್ಲ ಇವರು ಇದೇ ಬೆಲೆಯಲ್ಲಿ ಎರಡು ಜೋಡಿ ವಜ್ರದ ಇಯರಿಂಗ್ಸ್ ಅನ್ನು ಖರೀದಿಸಿದ್ದಾರೆ.
ಅಲ್ಲದೇ ಕಡಿಮೆ ಬೆಲೆಯಲ್ಲಿ ಈ ಐಷಾರಾಮಿ ಬ್ರಾಂಡ್ ಖರೀದಿಸಿದ ಬಗ್ಗೆ ಫುಲ್ ಖುಷಿಯಾದ ಅವರು ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ಟಿಯರ್ ಎಚ್ಚೆತ್ತುಕೊಂಡಿದ್ದು, ಇವರ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿ ಇವರಿಗೆ ಸಮಾಧಾನಕರ ಬಹುಮಾನ ನೀಡಿ ತೃಪ್ತಿ ಪಡಿಸಲು ಯತ್ನಿಸಿದೆ. ಆದರೆ ಸುಮ್ಮನಿರದ ವಿಲ್ಲಾರ್ರಿಯಲ್ ಇದರ ವಿರುದ್ಧ ಮೆಕ್ಸಿಕೋದ ಫೆಡರಲ್ ಗ್ರಾಹಕರ ರಕ್ಷಣಾ ಏಜೆನ್ಸಿಯಲ್ಲಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರ ನ್ಯಾಯಾಲಯವೂ ಕರ್ಟಿಯರ್ ವೆಬ್ಸೈಟ್ಗೆ ಸಮನ್ಸ್ ಕಳುಹಿಸಿದೆ. ಹೀಗಾಗಿ ತಿಂಗಳುಗಳ ನಂತರ ತಾವು ಖರೀದಿಸಿದ ಬೆಲೆಗೆ ಇವರಿಗೆ ಎರಡು ಜೊತೆ ಇಯರಿಂಗ್ಗಳು ಸಿಕ್ಕಿದ್ದು, ಅದರಲ್ಲಿ ಒಂದು ತನಗೆ ಒಂದು ತನ್ನ ತಾಯಿಗೆ ಖರೀದಿಸಿದ್ದಾಗಿ ಅವರು ಹೇಳಿದ್ದಾರೆ. ಏಪ್ರಿಲ್ 26ರಂದು ವಿಲ್ಲಾರ್ರಿಯಲ್ ತುಂಬಾ ನೀಟ್ ಆಗಿ ಪೋಲ್ಡ್ ಮಾಡಿದ ಬಾಕ್ಸ್ನಲ್ಲಿ ತನಗೆ ಐಷಾರಾಮಿ ಬ್ರಾಂಡ್ನ ಪಾರ್ಸೆಲ್ ಬಂದಿರುವುದರ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಈತನ ಈ ಪೋಸ್ಟ್ಗೆ ಜನ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈತ ಅವಕಾಶವನ್ನು ಬಳಸಿಕೊಂಡಿದ್ದಕ್ಕೆ ಟೀಕಿಸಿದ್ದಾರೆ.