ನ್ಯೂಸ್ ನಾಟೌಟ್: ದಕ್ಷಿಣಕನ್ನಡದಲ್ಲಿ ಇತ್ತೀಚೆಗೆ ಮಾದಕ ವಸ್ತು ಸಾಗಾಟ ಮತ್ತು ಸೇವನೆ ಹೆಚ್ಚಾಗಿದೆ. ಮಾದಕ ವಸ್ತು ಸೇವಿಸಿದ್ದಲ್ಲದೇ, ಮಾರಾಟ ನಡೆಸಲು ಸಾಗಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಲತಃ ಸಜಿಪನಡು ಗ್ರಾಮದ ನಿವಾಸಿ, ಪ್ರಸ್ತುತ ಬಂಟ್ವಾಳ-ಲೊರೆಟ್ಟೊಪದವಿನಲ್ಲಿ ವಾಸವಾಗಿರುವ ದಾವುದುಲ್ ಹಕೀಂ (23) ಎಂದು ಗುರುತಿಸಲಾಗಿದೆ.
ಬಿ. ಕಸಬಾ ಗ್ರಾಮದ ಕ್ಯಾಶೂ ಫ್ಯಾಕ್ಟರಿ ಬಳಿ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ಆತನನ್ನು ತಡೆದ ಬಂಟ್ವಾಳ ನಗರ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರ ನೇತೃತ್ವದ ಪೊಲೀಸರು ವಿಚಾರಿಸಿದಾಗ ಆತ ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಯ ದ್ವಿಚಕ್ರ ವಾಹನ ಪರಿಶೀಲನೆ ನಡೆಸಿದಾಗ 01.07 ಗ್ರಾಂ ನಿದ್ರಾಜನಕ ಎಂಡಿಎಂಎ ಹಾಗೂ 15.31 ಗ್ರಾಂ ಗಾಂಜಾ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯಿಂದ ಈ ಅಮಲು ಪದಾರ್ಥಗಳನ್ನು ಖರೀದಿಸಿ ಅದರಲ್ಲಿ ಸ್ವಲ್ಪಾಂಶ ಗಾಂಜಾವನ್ನು ಸೇವಿಸಿ, ಉಳಿದ ಎಂಡಿಎಂಎ ಹಾಗೂ ಗಾಂಜಾವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಳಿ ಇದ್ದ ಮಾದಕ ವಸ್ತುಗಳ ಮೌಲ್ಯ ಎರಡೂವರೆ ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾದಕ ವಸ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click 👇