ಅಂತ್ಯಸಂಸ್ಕಾರದ ವೇಳೆ ಬದುಕಿದ ಮಗು..! ಪವಾಡ ಎಂದು ದರ್ಗಾಕ್ಕೆ ಮಗುವನ್ನು ಕೊಂಡೊಯ್ದ ಪೋಷಕರು..!

ನ್ಯೂಸ್ ನಾಟೌಟ್: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವೊಂದು ಕೆಮ್ಮಿದ ಕಾರಣ ಜೀವ ಉಳಿದ ಘಟನೆ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಡೆದಿದೆ. ಬದುಕಿದ ಬಳಿಕ ಆಸ್ಪತ್ರೆಯ ಬದಲು ಮುರ್ತುಜಾ ಖಾದ್ರಿ ಪವಾಡ ಎಂದು ನಂಬಿ ಪೋಷಕರು ಮಗುವನ್ನು ದರ್ಗಾಕ್ಕೆ ಕರೆದುಕೊಂಡು ಹೋದ್ದರು, ಬಳಿಕ ಚಿಕಿತ್ಸೆ ನೀಡಲಾಗಿದೆ. ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿಯ 13 ತಿಂಗಳ ದ್ಯಾಮಣ್ಣ ಭಜಂತ್ರಿ ಎಂಬ ಮಗು ಎಂದು ಗುರುತಿಸಲಾಗಿದೆ. ಉಸಿರಾಟ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕೋದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ವಾಪಸ್ ವಾಹನದಲ್ಲಿ ಬರುವಾಗ ಮಗುವಿಗೆ ಪ್ರಜ್ಞೆ ತಪ್ಪಿದೆ ಎನ್ನಲಾಗಿದೆ. ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದಾರೆ. ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಅಂತ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದವರಿಗೆ ಅಚ್ಚರಿಯಾಗಿದ್ದಾರೆ. ಮಗುವಿಗೆ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.