ನ್ಯೂಸ್ ನಾಟೌಟ್: ಏಷ್ಟೋ ಮಂದಿ ಶೋಕಿಗಾಗಿ ಅಥವಾ ಇನ್ನಿತರ ಕಾರಣದಿಂದ ತಂಬಾಕು ಸೇವನೆಯ ಚಟಕ್ಕೆ ದಾಸರಾಗಿಬಿಡುತ್ತಾರೆ. ಆದರೆ ಇದರ ಕೆಟ್ಟ ಪರಿಣಾಮ ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸಿಬಿಡುತ್ತದೆ ಎಂದು ನಿಮಗೆ ಅರಿವಿದೆಯೇ..? ಮೇ 31 ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಂದಕಿಶೋರ್ ಕೆ.ಎಸ್. ಅವರು ತಂಬಾಕು ಸೇವನೆಯ ದುಷ್ಪರಿಣಾಮದಿಂದ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುವುದರ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.
ತಂಬಾಕು ಮನುಷ್ಯನ ಜೀವನಕ್ಕೆ ಅತ್ಯಂತ ಅಪಾಯವನ್ನು ಉಂಟು ಮಾಡುವ ವಸ್ತು. ಇದರಲ್ಲಿ ಒಳಗೊಂಡಿರುವ ನಿಕೋಟಿನ್ ಮತ್ತು ಇತರ ರಾಸಾಯನಿಕ ಅಪಾಯಕಾರಿ ಅಂಶಗಳು ಹೃದಯ, ರಕ್ತನಾಳ ಮತ್ತು ಉಸಿರಾಟದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. 20ಕ್ಕೂ ಹೆಚ್ಚು ವಿಭಿನ್ನ ಪ್ರಕಾರಗಳು ಅಥವಾ ಉಪವಿಧದ ಕ್ಯಾನ್ಸರ್, ಮತ್ತು ಇತರ ಅನೇಕ ದುರ್ಬಲಗೊಳಿಸುವ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅಂಕಿ ಅಂಶಗಳ ಪ್ರಕಾರ ತಂಬಾಕು ಸೇವನೆಯಿಂದ ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಜನರು ಮೃತಪಡುತ್ತಾರೆ.
ಸೆಕೆಂಡ್-ಹ್ಯಾಂಡ್ ಹೊಗೆ ( ತಂಬಾಕು ಸೇವೆನೆ ಮಾಡಿದವರ ಹೊಗೆಯನ್ನು ಸೇವನೆ ಮಾಡುವ ಇತರರು) ಒಡ್ಡುವಿಕೆಯು ಸಹ ಆರೋಗ್ಯದ ಮೇಲೆ ಅಪಾಯವನ್ನು ತಂದೊಡ್ಡುತ್ತದೆ. ಇದು ವಾರ್ಷಿಕವಾಗಿ 1.2 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತದೆ. ಅರ್ಧದಷ್ಟು ಮಕ್ಕಳು ತಂಬಾಕಿನ ಹೊಗೆಯಿಂದ ಕಲುಷಿತವಾದ ಗಾಳಿಯನ್ನು ಉಸಿರಾಡುತ್ತಾರೆ. ಪ್ರತಿ ವರ್ಷ 65000 ಮಕ್ಕಳು ಸೆಕೆಂಡ್ ಹ್ಯಾಂಡ್ ಹೊಗೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಗರ್ಭಾವಸ್ಥೆಯಲ್ಲಿ ಧೂಮಪಾನವು ಶಿಶುಗಳಿಗೆ ಹಲವಾರು ಜೀವಿತಾವಧಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮೇ 31 ರಂದು ತಂಬಾಕು ರಹಿತ ದಿನವನ್ನು ಆಚರಿಸುತ್ತಿದೆ. ಈ ಅಭಿಯಾನ ಯಾವುದೇ ಮಾದರಿಯ ತಂಬಾಕು ಬಳಕೆಯನ್ನು ತಡೆಗಟ್ಟಲು ಒಂದು ಅವಕಾಶವಾಗಿದೆ.
ಸುಮಾರು 8 ಸಾವಿರ ವರ್ಷಗಳಿಂದ ಅಮೇರಿಕದ ಮೂಲನಿವಾಸಿಗಳು Nicotiana tabacum ಅನ್ನು (ತಂಬಾಕು) ಅವರ ಪ್ರಾಚೀನ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. 1492ರಲ್ಲಿ ಮೊದಲ ಬಾರಿಗೆ ಯುರೋಪಿಯನ್ನರಿಂದ ತಂಬಾಕು ಕೃಷಿ ಆರಂಭವಾಯಿತು. 17ನೇ ಶತಮಾನದಲ್ಲಿ ಯುರೋಪ್ನಲ್ಲಿ ವ್ಯಾಪಕವಾಗಿ ಬೆಳೆಸಲಾಯಿತು. ನಂತರ ಪ್ರಪಂಚದ ವಿವಿಧ ಭಾಗಗಳಲ್ಲಿ ಹಬ್ಬಿತು. ಇದರ ಪರಿಣಾಮವಾಗಿ ಭಾರತದಲ್ಲೂ ತಂಬಾಕು ಕೃಷಿ ಪ್ರಮುಖ ಬೆಳೆಯಾಯಿತು. ಭಾರತದಲ್ಲಿ ಪೋರ್ಚುಗೀಸರು ಗುಜರಾತ್ ನಲ್ಲಿ ಮೊದಲ ಬಾರಿಗೆ ತಂಬಾಕು ಬೆಳೆಸಿದ್ದೇ ತಂಬಾಕು ಕೃಷಿಗೆ ಬುನಾದಿಯಾಯಿತು. ಬಳಿಕ ರಫ್ತು ಮಾಡುವ ದೇಶವಾಗಿ ಪರಿವರ್ತನೆಯಾಗುವ ಮಟ್ಟಕ್ಕೆ ಭಾರತ ತಂಬಾಕು ಬೆಳೆಯಲು ಆರಂಭಿಸಿತು.
ತಂಬಾಕಿನಿಂದ ಉತ್ಪನ್ನವಾಗುವ ನಿಕೋಟಿನ್ ಎಂಬ ಬಣ್ಣರಹಿತ ಅಂಶ ವ್ಯಸನಿಗಳಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ನಿಕೋಟಿನ್ ಅಂಶವು ಜೀವಕೋಶದ ಗ್ರಾಹಕಗಳನ್ನು (Receptors) ಬಂದಿಸಲ್ಪಟ್ಟು ಅದರ ಪರಿಣಾಮವನ್ನು ಬೀರುತ್ತದೆ. ಮನುಷ್ಯನ ಮೆದುಳಿನಲ್ಲಿ 9α(ಆಲ್ಫ) ಮತ್ತು 3β (ಬೀಟ) ನಿಕೋಟಿನ್ ಗ್ರಾಹಕಗಳಿರುತ್ತವೆ. ಅದರಲ್ಲೂ α4β2 ಗ್ರಾಹಕವು ವ್ಯಸನಕ್ಕೆ ಪ್ರಮುಖ ಕಾರಣ. ಹೀಗೆ ಗ್ರಾಹಕಗಳಿಗೆ ಬಂದಿಸಲ್ಪಟ್ಟ ನಿಕೋಟಿನ್ ನರಪ್ರೇಕ್ಷಕಗಳ (Neurotransmitters) ನಿರ್ವಹಣೆಗೆ ಪ್ರಭಾವವನ್ನು ಬೀರುತ್ತದೆ.
ತಂಬಾಕಿನಲ್ಲಿ ಹಲವು ವಿಧಗಳಿವೆ. ಅದರಲ್ಲೂ ಸಿಗಾರ್ ಮತ್ತು ತಂಬಾಕು ಜಗಿಯುವುದರಿಂದ ಅತ್ಯಂತ ಅಪಾಯವಿದೆ. ಇವುಗಳು ಕ್ಷಾರೀಯ ಗುಣಗಳನ್ನು ಹೊಂದಿದ್ದು, ಇದರಿಂದ ತಯಾರಾದ ನಿಕೋಟಿನ್ ಬಹು ಬೇಗ ಬಾಯಿಯ ಲೋಳೆಪೊರೆಯಲ್ಲಿ (Buccalmucosa) ಹೀರಲ್ಪಡುತ್ತದೆ. ನಿಕೋಟಿನ್ ಶ್ವಾಸಕೋಶದ ಆಲ್ವಿಯೋಲೈಗೆ ಹೀರಲ್ಪಟ್ಟು ನಂತರ ರಕ್ತನಾಳಕ್ಕೆ ಸೇರುತ್ತದೆ. ರಕ್ತಕ್ಕೆ ಸೇರಿದ 15-20 ಸೆಕೆಂಡಿನಲ್ಲಿ ಮೆದುಳಿಗೆ ತಲುಪುತ್ತದೆ.
ಆರೋಗ್ಯಕ್ಕೆ ಮಾರಕವಾದ ನಿಕೋಟಿನ್, ಟಾರ್, ಕಾರ್ಬನ್ ಮೋನೋಕ್ಸೈಡ್, ಆರ್ಸೆನಿಕ್, ಅಸಿಟೋನ್ ಮತ್ತು ಇತರ ಅಂಶಗಳನ್ನು ಒಳಗೊಂಡ ತಂಬಾಕು ಸೇವನೆ ಮಾಡುವವರಿಗೆ ಮಾತ್ರ ಸೀಮಿತಗೊಳ್ಳದೆ ತಂಬಾಕಿನ ಉತ್ಪಾದನೆ, ತಯಾರಕರಿಗೂ ಹಾಗೂ ಸೆಕೆಂಡ್ ಹ್ಯಾಂಡ್ ಸೇವನೆಯವರಿಗೂ ಹಾನಿ ಉಂಟುಮಾಡುತ್ತದೆ. ತಂಬಾಕು ದೀರ್ಘಕಾಲದ ಪ್ರತಿರೋದಕ ಶ್ವಾಸಕೋಶದ ಕಾಯಿಲೆ (COPD) ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ತಂಬಾಕು ಮುಕ್ತ ವಿಶ್ವದತ್ತ ಹೆಜ್ಜೆ ಅಭಿಯಾನವು ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಪರಿಣಾಮಕಾರಿ ನೀತಿಗಳನ್ನು ಪ್ರತಿಪಾದಿಸುತ್ತದೆ, ಹಾಗೂ ನಿಯಂತ್ರಣದಲ್ಲಿ ತೊಡಗಿಸುತ್ತದೆ. ತಂಬಾಕು ನಿಯಂತ್ರಣ ಮತ್ತು ಸಂಬಂಧಿತ ಪ್ರತಿಕೂಲ ಆರೋಗ್ಯ ಪರಿಣಾಮಗಳ ತಡೆಗಟ್ಟುವಿಕೆಯ ಹೋರಾಟದಲ್ಲಿ ಆರೋಗ್ಯ ವೃತ್ತಿಪರರನ್ನು ನಿರ್ಧಿಷ್ಟವಾಗಿ ಶ್ವಾಸಕೋಶ ತಜ್ಞರು ಮತ್ತು ಉಸಿರಾಟ ತಜ್ಞರು ವ್ಯಾಪಕವಾಗಿ ಪಾಲ್ಗೊಳ್ಳಲು ಇದು ಒಂದು ಸಮರ್ಥನೀಯ ಅವಕಾಶವಾಗಿದೆ. ಈ ಮೂಲಕ ತಂಬಾಕು ಮುಕ್ತ ಪೀಳಿಗೆಯಾಗಲು WHO ಕರೆ ನೀಡುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ.