ನ್ಯೂಸ್ ನಾಟೌಟ್: ಶಾಲೆ -ಕಾಲೇಜುಗಳಲ್ಲಿ ಪಾಠ ತಪ್ಪಿಸಿಕೊಳ್ಳಲು ಅಥವಾ ತಿರುಗಾಟಕ್ಕೆ ಹೋಗಲು ಹಲವು ಬಾರಿ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕ ರಜೆ ಹಾಕಿ ಶಿಕ್ಷೆ ಅನುಭವಿಸುವುದು ಕೇಳಿರುತ್ತೇವೆ. ಆದರೆ, ಅನಾರೋಗ್ಯ ಕಾರಣ ನೀಡಿ ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ಸಿಬ್ಬಂದಿ ಸಾಮೂಹಿಕ ರಜೆ ಹಾಕಿರುವ ಪರಿಣಾಮ ಏರ್ ಇಂಡಿಯಾದ 86 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡ ಘಟನೆ ಇಂದು(ಮೇ.8) ನಡೆದಿದೆ.
ಸಂಬಳದ ವಿಚಾರದಲ್ಲಿ ಅಸಮಾಧಾನ ಹೊಂದಿರುವ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ನೋಟಿಸ್ ನೀಡದೇ ಕೆಲಸಕ್ಕೆ ಗೈರಾಗಿದ್ದಾರೆ. ಅನಾರೋಗ್ಯ ಕಾರಣ ನೀಡಿ ಸಾಮೂಹಿಕವಾಗಿ ಸಿಬ್ಬಂದಿ ರಜೆ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿ ಕೊನೆಯ ಕ್ಷಣದಲ್ಲಿ ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.
ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಕಾರ್ಯಾಚರಣೆ ರದ್ದುಗೊಳಿಸಲಾಗಿದೆ. ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಈಗ ಎದುರಾಗಿರುವ ಪರಿಸ್ಥಿತಿಯು, ಇದುವರೆಗೆ ನಾವು ಒದಗಿಸಿರುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ರದ್ದತಿಯಿಂದ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುವುದು. ಪ್ರಯಾಣಕ್ಕೆ ದಿನಾಂಕವನ್ನು ಮರು ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಏರ್ಲೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.